
ಅಮೆರಿಕ -ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದಿಂದಾಗಿ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಯುದ್ಧ ಮುಂದುವರೆದಂತೆ ಇಂಧನ ಕೊರತೆ ಮತ್ತು ಬೆಲೆ ಏರಿಕೆ ಉಂಟಾಗಬಹುದು ಎಂಬ ಆತಂಕ ಜನಸಾಮಾನ್ಯರಲ್ಲಿ ಮೂಡಿದೆ.
ಹೀಗಾಗಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ವಾಹನ ಸವಾರರು ಪೆಟ್ರೋಲ್ ಹಾಕಿಸಿಕೊಳ್ಳಲು ಮುಗಿಬಿದ್ದಿದ್ದಾರೆ.
ತೈಲದ ಬೆಲೆ ಬ್ಯಾರಲ್ ಗೆ 100 ಡಾಲರ್ ವರೆಗೂ ತಲುಪಿದ್ದು, ತಲ ಸಾಗಾಣೆಯ ಪ್ರಮುಖ ಮಾರ್ಗ ಹಾರ್ಮೂಜ್ ನಲ್ಲಿ ಹಡಗುಗಳ ಸಂಚಾರಕ್ಕೆ ಇರಾನ್ ನಿರ್ಬಂಧ ಹೇರಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಇಂಧನ ಕೊರತೆ, ಬೆಲೆ ಏರಿಕೆ ಬಗ್ಗೆ ತಪ್ಪು ಮಾಹಿತಿಗಳು ಹರಡಿದ್ದು, ಇದರ ಪರಿಣಾಮ ಭಟ್ಕಳದಲ್ಲಿ ಕೃತಕ ಅಭಾವ ಸೃಷ್ಟಿಯಾಗಿದೆ. ಪೆಟ್ರೋಲ್ ಬಂಕ್ ಗಳಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳಲು ಜನ ಮುಗಿಬಿದ್ದಿದ್ದಾರೆ. ಪೆಟ್ರೋಲ್ ದರ ದುಪ್ಪಟ್ಟಾಗುತ್ತೆ ಎಂದು ವಾಹನಗಳಿಗೆ ಹಾಗೂ ಕ್ಯಾನ್ ಗಳಿಗೆ ಪೆಟ್ರೋಲ್ ತುಂಬಿಸಿಕೊಳ್ಳತೊಡಗಿದ್ದಾರೆ. ಇನ್ನು ಕೆಲವರು ಭಟ್ಕಳದಿಂದ ಕುಂದಾಪುರ ಮತ್ತು ಹೊನ್ನಾವರ ಭಾಗದ ಪೆಟ್ರೋಲ್ ಬಂಕ್ ಗಳಿಗೆ ತೆರಳಿ ಪೆಟ್ರೋಲ್ ಹಾಕಿಸಿಕೊಂಡಿದ್ದಾರೆ.









