
ಕೆ.ಆರ್. ಪೇಟೆ ಪಟ್ಟಣದ ಜಯನಗರ ಬಡಾವಣೆಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ದಂಪತಿ ಸೋಮವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರು. ತಾಲ್ಲೂಕಿನ ಹೊಸಕೋಟೆ ಗ್ರಾಮದ ದರ್ಶನ್ (29)-ದಿವ್ಯಶ್ರೀ (25) ಮೃತ ದಂಪತಿ. ಘಟನೆಗೆ ಕಾರಣ ತಿಳಿದುಬಂದಿಲ್ಲ.
ದಂಪತಿಯ ಎರಡು ವರ್ಷದ ಹೆಣ್ಣುಮಗುವಿನ ಕುತ್ತಿಗೆ ಭಾಗದಲ್ಲಿ ಕೆಂಪು ಕಲೆ ಕಂಡುಬಂದಿದೆ. ಮಗುವನ್ನು ಸಾಯಿಸುವ ಉದ್ದೇಶದಿಂದ ಕುತ್ತಿಗೆ ಹಿಸುಕಿ ಹೀಗಾಗಿರಬಹುದು’ ಎಂದು ಶಂಕಿಸಿರುವ ಪೊಲೀಸರು, ‘ಮಗು ಪ್ರಾಣಾಪಾಯದಿಂದ ಪಾರಾಗಿದೆ’ ಎಂದು ತಿಳಿಸಿದ್ದಾರೆ.
‘ಪತ್ನಿಯು ಆತ್ಮಹತ್ಯೆಗೆ ಮಾಡಿಕೊಂಡಿದ್ದನ್ನು ನೋಡಿದ ಪತಿಯು ತನ್ನ ಅಣ್ಣನಿಗೆ ಕರೆ ಮಾಡಿ ಘಟನೆ ವಿವರಿಸಿ, ತಾನೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದರು. ತಾಳ್ಮೆ, ಧೈರ್ಯದಿಂದ ಇರುವಂತೆ ಅಣ್ಣ ಧೈರ್ಯ ತುಂಬಿದ್ದರು. ಆದರೆ ಅವರು ಬರುವಷ್ಟರಲ್ಲಿ ದರ್ಶನ್ ಆತ್ಮಹತ್ಯೆ ಮಾಡಿಕೊಂಡಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.
ನಾಟನಹಳ್ಳಿಯ ದಿವ್ಯಶ್ರೀ ಅವರ ಮದುವೆ ಮೂರು ವರ್ಷಗಳ ಹಿಂದೆ ದರ್ಶನ್ ಅವರೊಂದಿಗೆ ನಡೆದಿತ್ತು. ದರ್ಶನ್ ತಂದೆ ಗಣೇಶಗೌಡ ಅವರ ದೂರಿನ ಮೇರೆಗೆ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇನ್‌ಸ್ಪೆಕ್ಟರ್ ಸುನಿಲ್‌ಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದರು.









