ಮಂಗಳೂರು, ಮಾ.18: ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಬಡಗ ಎಡಪದವು ಗ್ರಾಮದ ಸಸ್ತಾವು ಎಂಬಲ್ಲಿ ಜಾನುವಾರುಗಳನ್ನು ಹಿಂಸಾತ್ಮಕವಾಗಿ ಕಾರಿನಲ್ಲಿ ತುಂಬಿಕೊಂಡು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣ ಪತ್ತೆಯಾಗಿದೆ. ಈ ಸಂಬಂಧ ಪೊಲೀಸರು ನಾಲ್ಕು ಜಾನುವಾರುಗಳು ಸೇರಿದಂತೆ ಒಟ್ಟು ₹8.42 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮಾರ್ಚ್ 18ರಂದು ಬೆಳಗ್ಗೆ 4.45ಕ್ಕೆ ಬಂದ ಮಾಹಿತಿಯ ಮೇರೆಗೆ ಎಸಿಪಿ ಶ್ರೀಕಾಂತ್ ಹಾಗೂ ಪಿಐ ಬಾಲಕೃಷ್ಣ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಶ್ರೀಮತಿ ಲತಾ ಹಾಗೂ ಸಿಬ್ಬಂದಿ ರಾಜೇಶ್, ಚಿದಾನಂದ, ಪ್ರಕಾಶ್ ಅವರು ದಾಳಿ ನಡೆಸಿದರು. ದಾಳಿಯ ವೇಳೆ DL 10 CE 6227 ಸಂಖ್ಯೆಯ ಫಾರ್ಚೂನರ್ ಕಾರಿನಲ್ಲಿ ನಾಲ್ಕು ದನಗಳ ಕಾಲುಗಳನ್ನು ಕಟ್ಟಿ ತುಂಬಿಕೊಂಡಿರುವುದು ಪತ್ತೆಯಾಯಿತು. ಸ್ಥಳದಿಂದ ಒಂದು ತಲವಾರ್ ಹಾಗೂ ಕಬ್ಬಿಣದ ರಾಡ್ ಸಹ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಕಾರು ಮತ್ತು ಜಾನುವಾರುಗಳನ್ನು ಬಿಟ್ಟು ಪರಾರಿಯಾಗಿದ್ದರು.
ಈ ಸಂಬಂಧ ಬಜಪೆ ಪೊಲೀಸ್ ಠಾಣೆಯಲ್ಲಿ ಮೊ.ನಂ.63/2026 ಪ್ರಕರಣ ದಾಖಲಿಸಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ (BNS) ಕಲಂ 303(2), ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆಯ ಕಲಂ 4, 5, 12, ಪ್ರಿವೆನ್ಷನ್ ಆಫ್ ಕ್ರೂರ್ತಿ ಟು ಅನಿಮಲ್ಸ್ ಆಕ್ಟ್ 1960ರ 11(A), 11(D), ಮೋಟಾರ್ ವಾಹನ ಕಾಯ್ದೆ 1988ರ 192(A) ಹಾಗೂ ಆರ್ಮ್ಸ್ ಆಕ್ಟ್ 1959ರ 4, 25(1B)(b) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಿಸಾರ್ @ ನಿಸಾರುದ್ದೀನ್ @ ಪಾರಿವಾಳ ನಿಸಾರ್ (28), ತಂದೆ ದಿ. ನಿಜಾಮುದ್ದೀನ್, ಹಾಲಿ ವಾಸ ಭಟ್ರಕೆರೆ, ಪೆರ್ಮದೆ ಗ್ರಾಮ, ಹಾಗೂ ಮೊಹಮ್ಮದ್ ಜಮಾಲುದ್ದೀನ್ @ ಜಮಾಲ್ (24), ತಂದೆ ಕೆ. ಬಾವ, ವಾಸ ಉಳಾಯಿಬೆಟ್ಟು ಗ್ರಾಮ, ಇವರನ್ನು ಮಾರ್ಚ್ 19ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಇನ್ನೂ ತಲೆಮರೆಸಿಕೊಂಡಿರುವ ಆರೋಪಿತರ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದ್ದು, ಶೋಧ ಕಾರ್ಯ ಮುಂದುವರೆದಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!