ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಯಾಣಿಸುತ್ತಿದ್ದ ವಿಮಾನವು ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ಕ್ಷಣದಲ್ಲಿ ಏಕಾಏಕಿ ಮತ್ತೆ ಟೇಕ್ ಆಫ್ ಆಗಿರುವ ಆತಂಕಕಾರಿ ಘಟನೆ ನಡೆದಿದೆ
ಡಿಸಿಎಂ ಡಿ.ಕೆ. ಶಿವಕುಮಾರ್, ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ಮತ್ತು ಎಂಎಲ್‌ಸಿ ಆರತಿ ಕೃಷ್ಣ ಅವರು ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಸಂಜೆ ಸುಮಾರು 4:55ರ ವೇಳೆಗೆ ವಿಮಾನವು ರನ್ವೇನಲ್ಲಿ ಇನ್ನೇನು ಲ್ಯಾಂಡ್ ಆಗಬೇಕು ಎನ್ನುವಷ್ಟರಲ್ಲಿ, ಚಕ್ರಗಳು ನೆಲಕ್ಕೆ ತಾಗುವ ಮೊದಲೇ ಪೈಲಟ್ ವಿಮಾನವನ್ನು ಮತ್ತೆ ಆಕಾಶಕ್ಕೆ ಹಾರಿಸಿದ್ದಾರೆ.
ಆತಂಕಕ್ಕೊಳಗಾದ ಪ್ರಯಾಣಿಕರು:
ರನ್ವೇ ಸಮೀಪ ಬಂದು ಏಕಾಏಕಿ ವಿಮಾನ ಮತ್ತೆ ಟೇಕ್ ಆಫ್ ಆದ ಕಾರಣ ವಿಮಾನದಲ್ಲಿದ್ದ ಡಿ.ಕೆ. ಶಿವಕುಮಾರ್ ಸೇರಿದಂತೆ ಎಲ್ಲಾ ಪ್ರಯಾಣಿಕರು ಕೆಲಕಾಲ ಗೊಂದಲ ಮತ್ತು ಆತಂಕಕ್ಕೊಳಗಾದರು. ಸುಮಾರು 7 ರಿಂದ 8 ನಿಮಿಷಗಳ ಕಾಲ ದೆಹಲಿ ಮತ್ತು ಗಾಜಿಯಾಬಾದ್ ಆಕಾಶದಲ್ಲಿ ಸುತ್ತಾಡಿದ ವಿಮಾನವು, ಎರಡನೇ ಬಾರಿಗೆ ಯಶಸ್ವಿಯಾಗಿ ಮತ್ತು ಸುರಕ್ಷಿತವಾಗಿ ಲ್ಯಾಂಡ್ ಆಯಿತು.
ಕಾರಣವೇನು?
ಈ ಘಟನೆಗೆ ನಿಖರವಾದ ಕಾರಣವಿನ್ನೂ ತಿಳಿದುಬಂದಿಲ್ಲ. ತಾಂತ್ರಿಕ ದೋಷ ಅಥವಾ ಏರ್ ಟ್ರಾಫಿಕ್ ಕಂಟ್ರೋಲ್ (ATC) ನಿಂದ ಸರಿಯಾದ ಸಮಯದಲ್ಲಿ ಅನುಮತಿ ಸಿಗದ ಕಾರಣ ಈ ರೀತಿ ಆಗಿರಬಹುದು ಎಂದು ಶಂಕಿಸಲಾಗಿದೆ. ಸದ್ಯಕ್ಕೆ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದು, ನಿಟ್ಟುಸಿರು ಬಿಟ್ಟಿದ್ದಾರೆ.







