ಪುತ್ತೂರು:ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಗ್ರಾಹಕರಿಗಾಗಿ ವಿನೂತನವಾಗಿ ಆಯೋಜಿಸಲಾದ ‘ಪುತ್ತೂರು ಶಾಪಿಂಗ್ ಹಬ್ಬ’ ಕಾರ್ಯಕ್ರಮದ ಮೆಗಾ ಡ್ರಾ ಮಾ.29ರಂದು ಸಂಜೆ 6 ಗಂಟೆಗೆ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯಲಿದೆ ಎಂದು ವರ್ತಕರ ಸಂಘದ ಅಧ್ಯಕ್ಷರಾದ ರವಿಕೃಷ್ಣ ಡಿ. ಕಲ್ಲಾಜೆ ಮಾ. 26ರಂದು ನಡೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಕಳೆದ ಎರಡು ತಿಂಗಳಿಂದ ನಡೆಯುತ್ತಿರುವ ಶಾಪಿಂಗ್ ಹಬ್ಬದ ಅಂಗವಾಗಿ ಪುತ್ತೂರಿನ ವಿವಿಧ ವಾಣಿಜ್ಯ ಮಳಿಗೆಗಳಲ್ಲಿ ಖರೀದಿ ಮಾಡಿದ ಗ್ರಾಹಕರಿಗೆ ಉಚಿತ ಗಿಫ್ಟ್ ಕೂಪನ್‌ಗಳನ್ನು ವಿತರಿಸಲಾಗಿತ್ತು. ಕಳೆದ 8 ವಾರಗಳಿಂದ ಪ್ರತಿವಾರ ಸಂಘದ ಕಚೇರಿಯಲ್ಲಿ ಕೂಪನ್ ಡ್ರಾ ನಡೆಸಿ ವಾರದ ಬಹುಮಾನವಾಗಿ 8 ಮಂದಿ ಗ್ರಾಹಕರಿಗೆ 5G ಮೊಬೈಲ್ ಫೋನ್‌ಗಳು ಹಾಗೂ 80 ಸಮಾಧಾನಕರ ಬಹುಮಾನಗಳನ್ನು ವಿತರಿಸಲಾಗಿದೆ.
ಪುತ್ತೂರಿನ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಇಂತಹ ವೈಶಿಷ್ಟ್ಯಪೂರ್ಣ ಕಾರ್ಯಕ್ರಮವನ್ನು ವರ್ತಕರ ಸಂಘ ಆಯೋಜಿಸಿದೆ. ಮೆಗಾ ಡ್ರಾ ದಿನ ಮಾರುತಿ ಆಲ್ಟೋ ಕಾರು ಬಂಪರ್ ಬಹುಮಾನವಾಗಿ ಅದೃಷ್ಟಶಾಲಿ ಗ್ರಾಹಕರಿಗೆ ಲಭಿಸಲಿದೆ. ಜೊತೆಗೆ ಬೈಕ್, ಫ್ರಿಜ್, ಆಂಡ್ರಾಯ್ಡ್ ಟಿವಿ ಸೇರಿದಂತೆ ಹಲವು ಆಕರ್ಷಕ ಬಹುಮಾನಗಳನ್ನು ಗ್ರಾಹಕರು ಹಾಗೂ ವರ್ತಕರು ಪಡೆಯಲಿದ್ದಾರೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಂಗಳೂರು ಕೆನರಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಮಾಜಿ ಅಧ್ಯಕ್ಷರಾದ ಪಿ.ಬಿ. ಅಹಮದ್ ಮುದಸ್ಟರ್, ಜಿ.ಎಲ್. ಆಚಾರ್ಯ ಜುವೆಲರ್ಸ್‌ನ ಮಾಲೀಕ ಬಲರಾಮ ಆಚಾರ್ಯ ಹಾಗೂ ಸೋಜಾ ಅಲ್ಯೂಮಿನಿಯಂ ಸಂಸ್ಥೆಯ ಗಿಲ್ಬರ್ಟ್ ಡಿಸೋಜಾ ಭಾಗವಹಿಸಲಿದ್ದಾರೆ. ವರ್ತಕರ ಸಂಘದ ಅಧ್ಯಕ್ಷ ರವಿಕೃಷ್ಣ ಡಿ. ಕಲ್ಲಾಜೆ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಸುಮಾರು 70 ಸಾವಿರಕ್ಕೂ ಹೆಚ್ಚು ಗ್ರಾಹಕರಿಗೆ ತಲುಪಿದ ಈ ಯೋಜನೆ ವ್ಯಾಪಾರ ವ್ಯವಹಾರಕ್ಕೆ ಉತ್ತೇಜನ ನೀಡಿದೆಯೆಂದು ಸಂಘ ತಿಳಿಸಿದೆ. ಶಾಪಿಂಗ್ ಹಬ್ಬದ ಯಶಸ್ಸಿಗೆ ಕೈಜೋಡಿಸಿದ ಎಲ್ಲಾ ವರ್ತಕರು ಮತ್ತು ಗ್ರಾಹಕರಿಗೆ ಸಂಘ ಕೃತಜ್ಞತೆ ಸಲ್ಲಿಸಿದೆ. ಯೋಜನೆಯ ಯಶಸ್ಸಿಗೆ ಕಾರ್ಯಕಾರಿ ಸಮಿತಿ ಸದಸ್ಯರು ಹಗಲಿರುಳು ಶ್ರಮಿಸಿದ್ದಾರೆ ಎಂದು ತಿಳಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ವರ್ತಕರ ಸಂಘದ ಅಧ್ಯಕ್ಷ ರವಿಕೃಷ್ಣ ಡಿ. ಕಲ್ಲಾಜೆ, ಕಾರ್ಯದರ್ಶಿ ಉಲ್ಲಾಸ್ ಪೈ, ಉಪಾಧ್ಯಕ್ಷ ಮನೋಜ್ ಟಿ.ವಿ., ಶಾಪಿಂಗ್ ಹಬ್ಬದ ಸಂಚಾಲಕ ಶಶಿರಾಜ್ ರೈ ಹಾಗೂ ಸಹ ಸಂಚಾಲಕ ಎಂ.ಜಿ. ಅಬ್ದುಲ್ ರಫೀಕ್ ಉಪಸ್ಥಿತರಿದ್ದರು.
ಮಾಧ್ಯಮ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಂಘ ವಿನಂತಿಸಿದೆ.














