ವಿಟ್ಲ: ನಿಯಂತ್ರಣ ತಪ್ಪಿದ ಐಷಾರಾಮಿ ಕಾರೊಂದು ರಸ್ತೆ ಬದಿಯ ಬೃಹತ್ ಮಾವಿನ ಮರಕ್ಕೆ ಡಿಕ್ಕಿ ಹೊಡೆದ ಘಟನೆ ವಿಟ್ಲ–ಪುತ್ತೂರು ರಸ್ತೆಯ ಕಂಬಳಬೆಟ್ಟು ದರ್ಗಾ ಸಮೀಪ ನಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೆ.ಎ.01 ಎಂ.ಟಿ.0980 ನೋಂದಣಿ ಸಂಖ್ಯೆಯ ಫಾರ್ಚೂನರ್ ಕಾರು ವಿಟ್ಲದಿಂದ ಪುತ್ತೂರು ಕಡೆಗೆ ಸಂಚರಿಸುತ್ತಿತ್ತು. ಕಂಬಳಬೆಟ್ಟು ದರ್ಗಾ ಸಮೀಪ ತಲುಪುತ್ತಿದ್ದಾಗ ಕಾರಿನ ಮುಂಭಾಗದ ಟೈರ್ ಏಕಾಏಕಿ ಸ್ಫೋಟಗೊಂಡಿದೆ ಎಂದು ತಿಳಿದುಬಂದಿದೆ. ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯಲ್ಲಿದ್ದ ಬೃಹತ್ ಮಾವಿನ ಮರಕ್ಕೆ ಜೋರಾಗಿ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಯಿಂದ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಆದರೆ ಅಪಘಾತ ಸಂಭವಿಸಿದ ತಕ್ಷಣ ಕಾರಿನಲ್ಲಿದ್ದ ಸುರಕ್ಷತಾ ಏರ್‌ಬ್ಯಾಗ್‌ಗಳು ತೆರೆದುಕೊಂಡ ಕಾರಣ ಒಳಗಿದ್ದವರು ಯಾವುದೇ ಗಂಭೀರ ಗಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಘಟನೆಯ ಬಗ್ಗೆ ಸಂಬಂಧಿತ ಠಾಣಾ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.














