ಸುಳ್ಯ: ಅನಧಿಕೃತವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಸುಳ್ಯ ಪೊಲೀಸರು ಪತ್ತೆಹಚ್ಚಿ ದನದ ಮಾಲೀಕ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.
ಮಾ.26ರಂದು ಬೆಳಗ್ಗಿನ ಜಾವ ಸುಳ್ಯ ಪೊಲೀಸ್ ಠಾಣೆಯ ಉಪನಿರೀಕ್ಷಕ ಸಂತೋಷ್ ಬಿ.ಪಿ. ಅವರು ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಸುಳ್ಯ–ಆಲೆಟ್ಟಿ ಕ್ರಾಸ್ ಬಳಿ ಕೆಎಲ್ 59 ಡಿ 2979 ನೋಂದಣಿಯ ಬೊಲೆರೊ ಪಿಕಪ್ ವಾಹನ ಅನುಮಾನಾಸ್ಪದವಾಗಿ ಸಂಚರಿಸುತ್ತಿರುವುದು ಗಮನಕ್ಕೆ ಬಂದಿದೆ. ತಕ್ಷಣ ವಾಹನವನ್ನು ಆಲೆಟ್ಟಿ ಗ್ರಾಮದ ಮಿತ್ತಡ್ಕ ರೋಟರಿ ಶಾಲೆ ಸಮೀಪ ತಡೆದು ಪರಿಶೀಲನೆ ನಡೆಸಲಾಯಿತು.
ಈ ವೇಳೆ ವಾಹನದಲ್ಲಿದ್ದ ಒಬ್ಬ ವ್ಯಕ್ತಿ ಪರಾರಿಯಾಗಿದ್ದಾನೆ. ಚಾಲಕನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆತ ಕೇರಳದ ಕಣ್ಣೂರು ನಿವಾಸಿ ಇಸಾಕ್ ಕೆ.ಕೆ. (40) ಎಂದು ತಿಳಿದುಬಂದಿದೆ. ವಾಹನ ಪರಿಶೀಲನೆಯ ವೇಳೆ ಮೂರು ಜಾನುವಾರುಗಳನ್ನು ಹಿಂಸಾತ್ಮಕವಾಗಿ ತುಂಬಿಸಿ ಸಾಗಿಸುತ್ತಿರುವುದು ಪತ್ತೆಯಾಗಿದೆ.
ವಿಚಾರಣೆ ವೇಳೆ ಅಮರ ಪಡನೂರು ಗ್ರಾಮದ ಸಂತೋಷ್ ಎಂ.ಎಸ್. (48) ಅವರ ದನಗಳನ್ನು ಸುಳ್ಯ ನಿವಾಸಿ ಇಬ್ರಾಹಿಂ ಎ.ಎಂ. (32) ಅವರ ಮೂಲಕ ಖರೀದಿಸಿ, ಜಾನುವಾರು ಸಾಗಾಟಕ್ಕೆ ಅಗತ್ಯವಿರುವ ಪರವಾನಿಗೆ ಪಡೆಯದೆ ವಧೆ ಉದ್ದೇಶದಿಂದ ಸಾಗಿಸುತ್ತಿದ್ದ ಮಾಹಿತಿ ಬಹಿರಂಗವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ.39/2026 ಪ್ರಕರಣ ದಾಖಲಿಸಲಾಗಿದೆ. ಕರ್ನಾಟಕ ಪಶು ವಧೆ ನಿರ್ಬಂಧ ಮತ್ತು ಸಂರಕ್ಷಣೆ ಕಾಯ್ದೆ–2020ರ ಕಲಂ 4, 5, 6, 7, 12, ಪ್ರಿವೆನ್ಷನ್ ಆಫ್ ಕ್ರೂರಿಟಿ ಟು ಅನಿಮಲ್ಸ್ ಆಕ್ಟ್ 1960ರ ಕಲಂ 11(1)(ಡಿ) ಹಾಗೂ ಬಿಎನ್‌ಎಸ್ ಕಲಂ 303(2) ಅನ್ವಯ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.
ಬಂಧಿತ ಮೂವರ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.














