ಮಂಗಳೂರು: ನಗರದ ಹೊರವಲಯದ ತೊಕ್ಕೊಟ್ಟು ಫ್ಲೈಓವರ್ ಮೇಲ್ಭಾಗದಲ್ಲಿ ಶುಕ್ರವಾರ ಬೆಳಿಗ್ಗೆ ವ್ಯಕ್ತಿಯೋರ್ವನನ್ನು ಮಾರಕಾಸ್ತ್ರಗಳಿಂದ ಕಡಿದು ಹತ್ಯೆ ಮಾಡಿರುವ ಘಟನೆ ನಡೆದಿದೆ.
ಮುಳ್ಳುಗುಡ್ಡೆ ಹೌಸ್‌, ತಲಪಾಡಿ ನಿವಾಸಿ ಆರಿಫ್ ಯಾನೆ ‘ಟಾಬ್ಲೆಟ್ ಆರಿಫ್’ (46) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಾಥಮಿಕ ಮಾಹಿತಿಯಂತೆ, ಆರಿಫ್ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಢಿಕ್ಕಿ ಹೊಡೆದಿದ್ದಾರೆ. ಢಿಕ್ಕಿಯಿಂದ ರಸ್ತೆಗೆ ಬಿದ್ದ ತಕ್ಷಣ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಕೃತ್ಯ ಎಸಗಿದ ಬಳಿಕ ದುಷ್ಕರ್ಮಿಗಳು ಕಾರಿನಲ್ಲಿ ಪರಾರಿಯಾಗಿದ್ದಾರೆ. ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಆರಂಭಿಸಲಾಗಿದೆ.
ಮೃತ ಆರಿಫ್ ಮಂಗಳೂರು ಬಂದರು ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದನು. ಆತ ಬಂದರು ಪ್ರದೇಶದಲ್ಲಿ ಮೀನಿನ ವ್ಯಾಪಾರ ನಡೆಸುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. 2022ರ ಮೇ ತಿಂಗಳಲ್ಲಿ ಇದೇ ರೀತಿಯಲ್ಲಿ ಆರಿಫ್ ಮೇಲೆ ಕೊಲೆ ಯತ್ನ ನಡೆದಿತ್ತು. ಬಜಾಲಿನ ಟೊಪ್ಪಿ ನೌಫಾಲ್ ಹಾಗೂ ತಂಡವು ಚೂರಿಯಿಂದ ಇರಿದು ದಾಳಿ ನಡೆಸಿದ್ದರೂ, ಆತ ಪ್ರಾಣಾಪಾಯದಿಂದ ಪಾರಾಗಿದ್ದನು.
ಮೂಲತಃ ಕುದ್ರೋಳಿ ನಿವಾಸಿಯಾಗಿದ್ದ ಆರಿಫ್ ಕಳೆದ ಆರು–ಏಳು ವರ್ಷಗಳಿಂದ ಕುಟುಂಬ ಸಮೇತ ಅಜ್ಜಿನಡ್ಕ ಸಮೀಪದ ಮುಳ್ಳುಗುಡ್ಡೆಯಲ್ಲಿ ವಾಸಿಸುತ್ತಿದ್ದನು. ಮೃತರಿಗೆ ಪತ್ನಿ, ಮೂವರು ಪುತ್ರರು ಹಾಗೂ ಒಬ್ಬ ಪುತ್ರಿ ಇದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!