ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧ ಪರಿಸ್ಥಿತಿಯ ಹಿನ್ನೆಲೆಯಲ್ಲಿ ದೇಶದಲ್ಲಿ ಇಂಧನ ದರ ಏರಿಕೆ ಬಗ್ಗೆ ವ್ಯಕ್ತವಾಗುತ್ತಿರುವ ಆತಂಕಗಳ ನಡುವೆ ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಲೀಟರ್‌ಗೆ 10 ರೂ. ಕಡಿತಗೊಳಿಸಿದೆ.
ಗುರುವಾರ ತಡರಾತ್ರಿ ಪ್ರಕಟಿಸಿದ ಗೆಜೆಟ್ ಅಧಿಸೂಚನೆಯ ಪ್ರಕಾರ, ಪೆಟ್ರೋಲ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಲೀಟರ್‌ಗೆ 13 ರೂ.ನಿಂದ 3 ರೂ.ಗೆ ಇಳಿಸಲಾಗಿದೆ. ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 10 ರೂ.ನಿಂದ ಶೂನ್ಯಕ್ಕೆ ಇಳಿಸಲಾಗಿದೆ.
ಇರಾನ್–ಯುಎಸ್–ಇಸ್ರೇಲ್ ಸಂಘರ್ಷದ ಪರಿಣಾಮವಾಗಿ ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಪೂರೈಕೆ ಬಗ್ಗೆ ಅನಿಶ್ಚಿತತೆ ಉಂಟಾಗಿದೆ. ಇದರಿಂದ ಉಂಟಾದ ಇಂಧನ ಬಿಕ್ಕಟ್ಟಿನ ಹಿನ್ನೆಲೆ ಕೇಂದ್ರ ಈ ಕ್ರಮ ಕೈಗೊಂಡಿದೆ ಎಂದು ತಿಳಿಸಲಾಗಿದೆ.
ಕಚ್ಚಾ ತೈಲದ ಬೆಲೆ ಏರಿಕೆಯಿಂದಾಗಿ ಮಾರುಕಟ್ಟೆಯಲ್ಲಿ ಒತ್ತಡ ಎದುರಿಸುತ್ತಿದ್ದ ತೈಲ ಮಾರಾಟ ಕಂಪನಿಗಳಿಗೆ ಈ ನಿರ್ಧಾರದಿಂದ ತಾತ್ಕಾಲಿಕ ನಿರಾಳತೆ ಸಿಗುವ ನಿರೀಕ್ಷೆಯಿದೆ. ಜಾಗತಿಕ ಅನಿಶ್ಚಿತತೆಯ ಸಂದರ್ಭದಲ್ಲಿ ಇಂಧನ ದರಗಳನ್ನು ನಿಯಂತ್ರಣದಲ್ಲಿಡಲು ಹಾಗೂ ಗ್ರಾಹಕರಿಗೆ ಪರಿಹಾರ ಒದಗಿಸಲು ಇದು ಮಹತ್ವದ ಹೆಜ್ಜೆ ಎಂದು ವಲಯಗಳು ಅಭಿಪ್ರಾಯಪಟ್ಟಿವೆ.
ಆದಾಗ್ಯೂ, ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ದರಗಳಲ್ಲಿ ಸದ್ಯ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.







