ಪುತ್ತೂರು, ಏ.13: ತಾಲೂಕಿನ ಹನುಮಗಿರಿಯ ಬಯಲು ಕ್ಷೇತ್ರವಾದ ಶ್ರೀ ಕೋದಂಡರಾಮ–ಪಂಚಮುಖಿ ಆಂಜನೇಯ ದೇವಸ್ಥಾನದಲ್ಲಿ ಭಾನುವಾರ ಪುನಃಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮಗಳು ವೈದಿಕ ವಿಧಿವಿಧಾನಗಳೊಂದಿಗೆ ಭಕ್ತಿಭಾವದಿಂದ ನೆರವೇರಿದವು.
ದೈವಜ್ಞರ ಸಲಹೆಯಂತೆ ಏಕಕಾಲದಲ್ಲಿ ಶ್ರೀ ಕೋದಂಡರಾಮ ಮತ್ತು ಪಂಚಮುಖಿ ಆಂಜನೇಯ ದೇವರಿಗೆ ಪುನಃಪ್ರತಿಷ್ಠೆ ನಡೆಯಿತು. ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿ ಹಾಗೂ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಅವರ ಆಚಾರ್ಯತ್ವದಲ್ಲಿ, ಕಂಚಿ ಕಾಮಕೋಟಿ ಪೀಠಾಧಿಪತಿ ಜಗದ್ಗುರು ಪರಮಪೂಜ್ಯ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಹಾಗೂ ಹೊಸನಗರದ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಿತು.
ಸಾವಿರಾರು ಭಕ್ತರ ಸಮ್ಮುಖದಲ್ಲಿ ಬೆಳಿಗ್ಗೆ 8.20 ರಿಂದ 10.20ರ ವೃಷಭ ಲಗ್ನ ಸುಮುಹೂರ್ತದಲ್ಲಿ ಮಂತ್ರೋಚ್ಚಾರಣೆಯ ನಡುವೆ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕ ನೆರವೇರಿತು. ಇದರ ಪೂರ್ವಭಾಗವಾಗಿ ಗಣಪತಿ ಹೋಮ, ಪ್ರತಿಷ್ಠಾಪೂರ್ವ ವಿಧಿಗಳು ಜರುಗಿದವು. ಬಳಿಕ ಪರಿವಾರ ದೇವರ ಪ್ರತಿಷ್ಠೆ, ಪ್ರತಿಷ್ಠಾಬಲಿ, ಮಹಾಪೂಜೆ, ಮಹಾ ಮಂತ್ರಾಕ್ಷತೆ ಮತ್ತು ಪ್ರಸಾದ ವಿತರಣೆ ನಡೆಯಿತು.
ಸಂಜೆ ಶ್ರೀ ಕೋದಂಡರಾಮ ದೇವರಿಗೆ ರಂಗಪೂಜೆ, ಉತ್ಸವ ಬಲಿ, ದರ್ಶನ ಬಲಿ ಹಾಗೂ ಬಟಲು ಕಾಣಿಕೆ ಕಾರ್ಯಕ್ರಮಗಳು ಜರುಗಿದವು. ನಾಲ್ಕು ದಿನಗಳ ಬ್ರಹ್ಮಕಲಶೋತ್ಸವ ಈ ಮೂಲಕ ಸಂಪನ್ನಗೊಂಡಿತು.
ಈ ಸಂದರ್ಭದಲ್ಲಿ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಹಾಗೂ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಧಾರ್ಮಿಕ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಪಂದಳ ರಾಜಮನೆತನದ ಮಹಾರಾಜ ಪುಣರ್ತಂ ನಾರಾಯಣ ವರ್ಮ, ಆರ್‌ಎಸ್‌ಎಸ್ ಹಿರಿಯ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್, ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಮೋಹನದಾಸ ಪರಮಹಂಸ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಕಿಶೋರ್‌ಕುಮಾರ್ ಪುತ್ತೂರು, ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಶ್ಯಾಂ ಭಟ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸ್ವಾಗತ ಸಮಿತಿ ಅಧ್ಯಕ್ಷ ಡಾ. ರವೀಶ್ ಪಡುಮಲೆ ಹಾಗೂ ಸಮಿತಿಯ ಪದಾಧಿಕಾರಿಗಳು ಮತ್ತು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!