ಪುತ್ತೂರು: ಸನಾತನ ಧರ್ಮದ ರಕ್ಷಣೆ ಮಾಡುವವರನ್ನು ಸದಾ ಬೆಂಬಲಿಸಬೇಕು. ಧರ್ಮ ರಕ್ಷಣೆ ಕಾರ್ಯಕ್ಕೆ ಪ್ರತಿಯೊಬ್ಬರೂ ತಮ್ಮ ಮಟ್ಟಿನಲ್ಲಿ ಸಹಕಾರ ನೀಡಬೇಕು ಎಂದು ತಮಿಳುನಾಡಿನ ಕಂಚಿಪುರದ ಕಂಚಿ ಕಾಮಕೋಟಿ ಪೀಠದ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಮಹಾಸ್ವಾಮೀಜಿ ಹೇಳಿದರು.
ಹನುಮಗಿರಿ ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಮೂರನೇ ದಿನ ಶನಿವಾರ ನಡೆದ ಧರ್ಮ ಸಂದೇಶ ಕಲಾಪದಲ್ಲಿ ಅವರು ಆಶೀರ್ವಚನ ನೀಡಿದರು.
ಹಿಂದುವಾಗಿ ಹುಟ್ಟಿರುವುದು ಪುಣ್ಯ. ವ್ಯಕ್ತಿಗತ ಜೀವನದಲ್ಲಿ ವಿನಯ ಮತ್ತು ಸಮಷ್ಟಿ ಚಿಂತನೆಗೆ ಗರ್ವ ಇರಬೇಕು. ಆಗ ಮಾತ್ರ ಸಮಾಜದಲ್ಲಿ ಧರ್ಮ ರಕ್ಷಣೆ ಸಾಧ್ಯವಾಗುತ್ತದೆ. ಶಾಸ್ತ್ರೀಯ ವೈದಿಕ ಕುಟುಂಬಗಳಿಂದ ಬಂದವರು ವೇದಾಧ್ಯಯನ ಮಾಡಬೇಕು. ಪ್ರತಿ ಮನೆಯಿಂದ ಕನಿಷ್ಠ ಒಬ್ಬರಾದರೂ ವೇದಾಭ್ಯಾಸ ಮಾಡಿ ಸನಾತನ ಪರಂಪರೆ ಉಳಿಸಬೇಕು ಎಂದು ಅವರು ಕರೆ ನೀಡಿದರು.
ಹನುಮಗಿರಿ ಕ್ಷೇತ್ರದಲ್ಲಿ ರಾಮ ಮತ್ತು ಹನುಮರ ಸಮ್ಮಿಳಿತ ಶಕ್ತಿ ನೆಲೆಸಿದೆ. ಈ ಕ್ಷೇತ್ರದ ಮೂಲಕ ವಿದ್ಯೆ, ವೈದ್ಯಕೀಯ ಮತ್ತು ಲಘು ಉದ್ಯಮ ಕ್ಷೇತ್ರಗಳಿಗೆ ಪ್ರೋತ್ಸಾಹ ದೊರಕಬೇಕು ಎಂದರು.
ರಾಮನಷ್ಟು ಶ್ರೇಷ್ಠರಿಲ್ಲ
ಹೊಸನಗರ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ತೀರ್ಥ ಸ್ವಾಮೀಜಿ ಮಾತನಾಡಿ, ಶ್ರೀರಾಮನ ವ್ಯಕ್ತಿತ್ವ ಅತ್ಯಂತ ಶ್ರೇಷ್ಠವಾದುದು. ಈ ಜಗತ್ತಿನಲ್ಲಿ ಶ್ರೀರಾಮನಷ್ಟು ಶ್ರೇಷ್ಠ ವ್ಯಕ್ತಿತ್ವದ ಮನುಷ್ಯರು ಯಾರೂ ಹುಟ್ಟಿಲ್ಲ. ಶಿವನ ಅವತಾರಿಯಾದ ಆಂಜನೇಯನು ಹನುಮಗಿರಿಯಲ್ಲಿ ಪಂಚಮುಖಿಯಾಗಿ ನೆಲೆಸಿರುವುದು ಕ್ಷೇತ್ರದ ಪಾವಿತ್ರ್ಯವನ್ನು ಸಾರುತ್ತದೆ ಎಂದರು.
ಭರತ ಭೂಮಿಗೆ ತೇಜಸ್ಸು
ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ಇಂತಹ ಕಾರ್ಯಕ್ರಮಗಳು ಹಿಂದೂ ಸಮಾಜದ ಕಲ್ಯಾಣಕ್ಕೆ ಪೂರಕ. ಆಚಾರ್ಯರು ಲೋಕ ಕಲ್ಯಾಣಕ್ಕಾಗಿ ಸದಾ ಚಿಂತಿಸುತ್ತಾರೆ. ತಪಸ್ವಿಗಳ ತಪಸ್ಸಿನಿಂದ ಭರತ ಭೂಮಿಗೆ ತೇಜಸ್ಸು ಬಂದಿದೆ ಎಂದರು.
ಧರ್ಮಶ್ರೀ ಪ್ರತಿಷ್ಠಾನದ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪ್ರಧಾನ ಕಾರ್ಯದರ್ಶಿಗಳಾದ ಆರ್.ಸಿ. ನಾರಾಯಣ ರೆಂಜ ಮತ್ತು ನಹುಷ, ಪದಾಧಿಕಾರಿಗಳಾದ ಸೀತಾರಾಮ ರೈ ಕೆದಂಬಾಡಿಗುತ್ತು, ಸಾಜ ರಾಧಾಕೃಷ್ಣ ಆಳ್ವ, ಶಶಿಕುಮಾರ್ ರೈ ಬಾಲ್ಯೂಟ್ಟು, ಮುರಳಿಕೃಷ್ಣ ಹಸಂತಡ್ಕ, ಚನಿಲ ತಿಮ್ಮಪ್ಪ ಶೆಟ್ಟಿ, ಜೀವಂಧರ ಜೈನ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಅಳದಂಗಡಿ ತಿಮ್ಮಣ್ಣರಸರಾದ ಪದ್ಮಪ್ರಸಾದ್ ಅಜಿಲ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಹಿರಿಯ ನ್ಯಾಯವಾದಿ ಮಹೇಶ್ ಕಜೆ ಕಾರ್ಯಕ್ರಮ ನಿರ್ವಹಿಸಿದರು.
ಶ್ರೀರಾಮ ತಾರಕ ಮಹಾಯಾಗ ಸಂಪನ್ನ
ಬ್ರಹ್ಮಕಲಶೋತ್ಸವ ಅಂಗವಾಗಿ ಶನಿವಾರ ಹನುಮಗಿರಿ ಕ್ಷೇತ್ರದಲ್ಲಿ ಶ್ರೀರಾಮ ತಾರಕ ಮಹಾಯಾಗ ನೆರವೇರಿತು. ಕಂಚಿ ಕಾಮಕೋಟಿ ಪೀಠದ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಹಾಗೂ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ತೀರ್ಥ ಸ್ವಾಮೀಜಿ ಸಮ್ಮುಖದಲ್ಲಿ ಪೂರ್ಣಾಹುತಿ ನೆರವೇರಿಸಲಾಯಿತು.
ಶುಕ್ರವಾರ ಅಷ್ಟೋತ್ತರ ಶತನಾಳಿಕೇರ ಗಣಹೋಮದ ಬಳಿಕ 100ಕ್ಕೂ ಹೆಚ್ಚು ವೈದಿಕರಿಂದ ಜಪ ಪಠಣ ಆರಂಭಗೊಂಡಿತ್ತು. ಕಳೆದ ಒಂದು ತಿಂಗಳಿಂದ ಜಪದೀಕ್ಷೆ ಪಡೆದ ಸುಮಾರು 13 ಸಾವಿರ ಭಕ್ತರು ತಮ್ಮ ಮನೆಗಳಲ್ಲಿ ಶ್ರೀರಾಮ ತಾರಕ ಮಂತ್ರ ಪಠಣ ನಡೆಸಿದ್ದರು. ಒಂದು ಕೋಟಿ ಶ್ರೀರಾಮನಾಮ ಪಠಣ ಗುರಿ ಇಟ್ಟುಕೊಂಡಿದ್ದು, ಗುರಿ ಪೂರ್ಣಗೊಂಡ ಬಳಿಕ ಮಹಾಯಾಗ ಆಯೋಜಿಸಲಾಯಿತು.
ಪ್ರಾರ್ಥನೆ ಮತ್ತು ಪುಣ್ಯಾಹದ ಬಳಿಕ ಅರಣಿ ಮಥನದ ಮೂಲಕ ಅಗ್ನಿ ಸೃಜಿಸಿ ಪ್ರಧಾನ ಕುಂಡದಲ್ಲಿ ಸ್ಥಾಪನೆ ಮಾಡಲಾಯಿತು. 110 ವೈದಿಕರು 10 ಕುಂಡಗಳಲ್ಲಿ ಹೋಮ ನೆರವೇರಿಸಿದರು. ಬೆಳಗ್ಗೆ 7 ಗಂಟೆಗೆ ಆರಂಭವಾದ ಯಾಗ ಮಧ್ಯಾಹ್ನ ಪೂರ್ಣಗೊಂಡು, 12 ಗಂಟೆಗೆ ಪೂರ್ಣಾಹುತಿ ನೀಡಲಾಯಿತು.

Leave a Reply

Your email address will not be published. Required fields are marked *

Join WhatsApp Group
error: Content is protected !!