ಬೆಂಗಳೂರು: ಈ ಬಾರಿಯ ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಆಯೋಜನೆಗೆ ರಾಜ್ಯ ಸರ್ಕಾರ ಅಧಿಕೃತ ಅನುಮೋದನೆ ನೀಡಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಶುಕ್ರವಾರ ವಿಧಾನಸೌಧದಲ್ಲಿ ನಡೆದ ಹೈಪವರ್ ಸಮಿತಿ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಯಿತು.ಸಭೆಯಲ್ಲಿ ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗಳ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಮೈಸೂರು ಸಂಸದ ಯದುವೀರ್ ಸೇರಿದಂತೆ ವಿವಿಧ ಪಕ್ಷಗಳ ಪ್ರತಿನಿಧಿಗಳೂ ಸಭೆಯಲ್ಲಿ ಉಪಸ್ಥಿತರಿದ್ದರು.ದಸರಾ ಸಂದರ್ಭದಲ್ಲಿ ಕಂಬಳ ಆಯೋಜನೆಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ತುಳುನಾಡಿನ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳಕ್ಕೆ ಸ್ಥಾನ ದೊರೆಯಲಿದೆ.ಸಭೆಯ ಬಳಿಕ, ದಸರಾದಲ್ಲಿ ಕಂಬಳಕ್ಕೆ ಅವಕಾಶ ಕಲ್ಪಿಸಿರುವುದಕ್ಕಾಗಿ ಜಿಲ್ಲಾ ಕಂಬಳ ಸಮಿತಿ ವತಿಯಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಸನ್ಮಾನಿಸಲಾಯಿತು. ಪುತ್ತೂರು ಶಾಸಕ ಅಶೋಕ್ ರೈ ಹಾಗೂ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಅವರು ಪೇಟ ಧರಿಸಿ ಕಂಬಳದ ಬೆತ್ತ ನೀಡಿ ಗೌರವಿಸಿದರು.ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಅಶೋಕ್ ರೈ, “ಮೈಸೂರು ದಸರಾದಲ್ಲಿ ಕಂಬಳ ಆಯೋಜನೆಗೆ ಸರ್ಕಾರ ತೀರ್ಮಾನ ಕೈಗೊಂಡಿರುವುದು ತುಳುನಾಡಿನ ಜನಪದ ಕ್ರೀಡೆಗೆ ಮತ್ತಷ್ಟು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಪ್ರಚಾರ ದೊರಕಲು ಸಹಕಾರಿಯಾಗಲಿದೆ” ಎಂದು ಹೇಳಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!