ಪುತ್ತೂರು: ಪುರುಷರಕಟ್ಟೆಯಲ್ಲಿ ಜುಲೈ 8ರಂದು ನಡೆದ ಘಟನೆಯ ಸಂಬಂಧ ದೂರು ನೀಡಿದ್ದ ಯುವತಿಯ ವಿರುದ್ಧವೇ ಪೊಲೀಸರು ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ಸಂಸದ ಬ್ರಿಜೇಶ್ ಚೌಟ ಹಾಗೂ ಬಿಜೆಪಿ ಮುಖಂಡರು ಶುಕ್ರವಾರ ನೊಂದ ಕುಟುಂಬದ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದರು.ಆನಡ್ಕ ನಿವಾಸಿ ಸಾಂತಪ್ಪ ಗೌಡರ ಮನೆಗೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬ್ರಿಜೇಶ್ ಚೌಟ, ಘಟನೆ ಕುರಿತು ದೂರು ನೀಡಿದ್ದ ಯುವತಿಯ ವಿರುದ್ಧ ಪ್ರಕರಣ ದಾಖಲಿಸಿರುವುದು ಆತಂಕಕಾರಿ ಬೆಳವಣಿಗೆ ಎಂದು ಹೇಳಿದರು. ಈ ಪ್ರಕರಣದಲ್ಲಿ ಪೊಲೀಸರು ನಿಷ್ಪಕ್ಷಪಾತವಾಗಿ ನಡೆದುಕೊಳ್ಳಬೇಕು ಹಾಗೂ ಘಟನೆಯ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.ಯುವತಿಗೆ ನ್ಯಾಯ ಒದಗಿಸುವ ಬದಲು ಆಕೆಯ ವಿರುದ್ಧವೇ ಪ್ರಕರಣ ದಾಖಲಿಸಿರುವುದರಿಂದ ಮಹಿಳೆಯರಲ್ಲಿ ಭಯದ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟರು. ಈ ಕುರಿತು ಸಂಬಂಧಿತ ಅಧಿಕಾರಿಗಳು ಹಾಗೂ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಪುತ್ತೂರಿನಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಸಾರ್ವಜನಿಕರಲ್ಲಿ ಆತಂಕ ಮೂಡಿಸುವಂತಹ ಬೆಳವಣಿಗೆಗಳು ನಡೆಯುತ್ತಿವೆ ಎಂದು ಆರೋಪಿಸಿದರು. ಘಟನೆಯ ನಂತರ ದೂರುದಾರರ ಕುಟುಂಬವೇ ಸಂಕಷ್ಟಕ್ಕೆ ಸಿಲುಕಿರುವುದು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದರು.ಈ ಪ್ರಕರಣದಲ್ಲಿ ನ್ಯಾಯಯುತ ತನಿಖೆ ನಡೆಸಿ ಸತ್ಯಾಸತ್ಯತೆ ಬಹಿರಂಗಗೊಳಿಸಬೇಕು. ದೂರುದಾರರ ಹಕ್ಕುಗಳನ್ನು ರಕ್ಷಿಸುವ ಜವಾಬ್ದಾರಿ ಪೊಲೀಸ್ ಇಲಾಖೆಯ ಮೇಲಿದೆ ಎಂದು ಅವರು ಹೇಳಿದರು.ಬಿಜೆಪಿ ಕಾರ್ಯಕರ್ತರು ಹಾಗೂ ಸ್ಥಳೀಯ ಮುಖಂಡರು ಕುಟುಂಬದೊಂದಿಗೆ ನಿಂತು ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಪ್ರಕರಣದ ಮುಂದಿನ ಬೆಳವಣಿಗೆಗಳನ್ನು ಪಕ್ಷ ಗಮನಿಸುತ್ತಿದ್ದು, ಅಗತ್ಯವಿದ್ದಲ್ಲಿ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸಲಾಗುವುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಯತೀಶ್ ಅರುವಾರು, ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ.ಬಿ., ಆರ್.ಸಿ. ನಾರಾಯಣ್, ಡಾ. ಕೃಷ್ಣಪ್ರಸನ್ನ ಸೇರಿದಂತೆ ಹಲವು ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.







