ಮಂಗಳೂರು, ಎ.27: ಕಾರವಾರ–ಮಂಗಳೂರು–ಬೆಂಗಳೂರು ಮಧ್ಯೆ ಸಂಚರಿಸುತ್ತಿದ್ದ ರೈಲಿನಲ್ಲಿ ಗರ್ಭಿಣಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡ ಸಂದರ್ಭದಲ್ಲಿ, ರೈಲಿನಲ್ಲೇ ಪ್ರಯಾಣಿಸುತ್ತಿದ್ದ ಮಹಿಳೆಯರು ತಕ್ಷಣ ಕಾರ್ಯಪ್ರವೃತ್ತರಾಗಿ ಸಹಜ ಹೆರಿಗೆಗೆ ನೆರವಾದ ಘಟನೆ ಬಂಟ್ವಾಳ ಸಮೀಪದ ಬಿ.ಸಿ.ರೋಡ್ ಬಳಿ ಭಾನುವಾರ ನಡೆದಿದೆ.
ಮಂಗಳೂರು ಜಂಕ್ಷನ್‌ನಿಂದ ಹೊರಟ ರೈಲಿನಲ್ಲಿ ಮೈಸೂರು ಮೂಲದ ಗರ್ಭಿಣಿ ಪೊನ್ನಮ್ಮ ಅವರಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಬಿ.ಸಿ.ರೋಡ್ ತಲುಪುವಷ್ಟರಲ್ಲಿ ರಕ್ತಸ್ರಾವವೂ ಉಂಟಾಯಿತು.
ಅದೇ ರೈಲಿನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ಮುಸ್ಲಿಂ ಸಮುದಾಯದ ಮಹಿಳೆಯರು ಆರಂಭದಲ್ಲಿ ಅವರನ್ನು ಉಪಚರಿಸಿ, ಬಳಿಕ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ತಕ್ಷಣ ಸ್ಪಂದಿಸಿದ ರೈಲ್ವೆ ಇಲಾಖೆ ಬಿಸಿರೋಡ್ ನಿಲ್ದಾಣದಲ್ಲಿ ರೈಲನ್ನು ನಿಲ್ಲಿಸಿ, ಸ್ಥಳೀಯ ಸೋಮಯಾಜಿ ಆಸ್ಪತ್ರೆಯ ವೈದ್ಯರ ತಂಡವನ್ನು ಸ್ಥಳಕ್ಕೆ ಕರೆಸಿ ರೈಲು ಬೋಗಿಯೊಳಗೆ ಹೆರಿಗೆಗೆ ಅಗತ್ಯ ವ್ಯವಸ್ಥೆ ಮಾಡಿತು. ಬಳಿಕ ವೈದ್ಯರ ತಂಡ ಯಶಸ್ವಿಯಾಗಿ ಹೆರಿಗೆ ನೆರವೇರಿಸಿತು.














