ಉಪ್ಪಿನಂಗಡಿ: ನೀರು ಕೇಳುವ ನೆಪದಲ್ಲಿ ಮನೆಗೆ ಬಂದು ಮಹಿಳೆಯರೇ ಇರುವುದನ್ನು ಖಚಿತಪಡಿಸಿಕೊಂಡು ಒಳನುಗ್ಗಿ ಭೀತಿ ಸೃಷ್ಟಿಸಿದ ಅಪರಿಚಿತ ವ್ಯಕ್ತಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಇಲ್ಲಿ ನಡೆದಿದೆ.
ಬ್ಯಾಂಕ್ ರಸ್ತೆಯ ಸಮೀಪ ವೃದ್ಧೆಯೊಬ್ಬರು ಮನೆಯಲ್ಲಿ ಒಬ್ಬರೇ ಇದ್ದ ವೇಳೆ, ನೀರು ಕೇಳಿ ಬಂದ ವ್ಯಕ್ತಿ ವೃದ್ಧೆ ಅಡುಗೆಮನೆಗೆ ತೆರಳಿದ ಸಂದರ್ಭವನ್ನು ಬಳಸಿಕೊಂಡು ಮನೆಗೆ ನುಗ್ಗಿ ಬಾಗಿಲಿಗೆ ಚಿಲಕ ಹಾಕಿದ್ದಾನೆ. ಇದನ್ನು ಗಮನಿಸಿದ ವೃದ್ಧೆ ಭೀತಿಯಿಂದ ಬೊಬ್ಬಿರಿಸಿದಾಗ ಆತ ಅಲ್ಲಿಂದ ಪರಾರಿಯಾಗಿದ್ದಾನೆ.
ಅಲ್ಲಿಂದ ಸಮೀಪದಲ್ಲಿದ್ದ ಮತ್ತೊಂದು ಮನೆಯಲ್ಲಿದ್ದ ಒಂಟಿ ಮಹಿಳೆಯ ಮನೆಯ ಕೊಠಡಿಗೆ ನುಗ್ಗಿ ಬಾಗಿಲು ಹಾಕಲು ಯತ್ನಿಸಿದ್ದಾನೆ. ಮಹಿಳೆ ಹಾಗೂ ಸ್ಥಳೀಯರು ಕೂಗಿ ಸಹಾಯ ಕೋರಿದ ಪರಿಣಾಮ ಆತ ಮತ್ತೆ ಪರಾರಿಯಾಗಿದ್ದು, ಬಳಿಕ ಸಮೀಪದ ಉದ್ಯಮಿಯೋರ್ವರ ಮನೆಯ ಹಿಂಭಾಗದ ಕಟ್ಟಡದಲ್ಲಿ ಅಡಗಿ ಕುಳಿತಿದ್ದಾನೆ.
ಸ್ಥಳೀಯರು ಹಿಂಬಾಲಿಸಿ ಉದ್ಯಮಿಗೆ ಮಾಹಿತಿ ನೀಡಿದ ಬಳಿಕ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮೊದಲಿಗೆ ಮೂಕ ಭಾಷೆಯಲ್ಲಿ ನೀರು ಕೇಳಿದ್ದ ಈತ, ಬಳಿಕ ಪೊಲೀಸರ ವಶಕ್ಕೆ ನೀಡುವ ವೇಳೆ ಮಲಯಾಳಂ ಭಾಷೆಯಲ್ಲಿ ಮಾತನಾಡಿ ತಾನು ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತೇನೆಂದು ಹೇಳಿದ್ದಾನೆ.
ಬಿಸಿಲಿನಿಂದ ಬಳಲಿ ಬಂದವನಿಗೆ ಮಾನವೀಯ ದೃಷ್ಟಿಯಿಂದ ನೀರು ನೀಡಲು ಮುಂದಾದ ಸಂದರ್ಭವನ್ನು ದುರುಪಯೋಗಪಡಿಸಿಕೊಂಡಿರುವ ಈ ಘಟನೆಯಿಂದ ಪ್ರದೇಶದಲ್ಲಿ ಆತಂಕ ಉಂಟಾಗಿದೆ. ಬಂಧಿತ ವ್ಯಕ್ತಿಯ ಹಿನ್ನೆಲೆಯನ್ನು ಪೊಲೀಸರು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.














