ಪುತ್ತೂರು, ಮೇ 21: ಬೆಳ್ಳಿಪಾಡಿ ಗ್ರಾಮದ ಕಠಾರ ಸಮೀಪ ನೇತ್ರಾವತಿ ನದಿಯಲ್ಲಿ ಈಜಲು ತೆರಳಿದ್ದ ಕಾಲೇಜು ವಿದ್ಯಾರ್ಥಿಯೋರ್ವ ನೀರುಪಾಲಾದ ದುರ್ಘಟನೆ ಗುರುವಾರ ಸಂಭವಿಸಿದೆ.
ಮೃತರನ್ನು ಗದಗ ಮೂಲದ ಕಿರಣ್ ಎಂದು ಗುರುತಿಸಲಾಗಿದೆ. ಅವರು ಪುತ್ತೂರಿನ ವಿದ್ಯಾಸಂಸ್ಥೆಯೊಂದರಲ್ಲಿ ಫಾರ್ಮಸಿ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಮಾಹಿತಿಯಂತೆ, ನಾಲ್ವರು ಯುವಕರು ಈಜಲೆಂದು ನೇತ್ರಾವತಿ ನದಿಗೆ ತೆರಳಿದ್ದರು. ಈ ವೇಳೆ ಕಿರಣ್ ಅವರು ನದಿಗೆ ಇಳಿದಾಗ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳದಲ್ಲಿ ಈ ಹಿಂದೆಯೂ ಹಲವು ಅವಘಡಗಳು ಸಂಭವಿಸಿದ್ದ ಹಿನ್ನೆಲೆಯಲ್ಲಿ ನದಿಗೆ ಇಳಿಯದಂತೆ ಎಚ್ಚರಿಕೆ ಫಲಕ ಅಳವಡಿಸಲಾಗಿತ್ತು. ಆದರೂ ಯುವಕರು ಹಾಗೂ ವಿದ್ಯಾರ್ಥಿಗಳು ಎಚ್ಚರಿಕೆಯನ್ನು ನಿರ್ಲಕ್ಷಿಸಿ ನೀರಿಗೆ ಇಳಿಯುತ್ತಿರುವ ಘಟನೆಗಳು ಮರುಕಳಿಸುತ್ತಿವೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ














