ಪುತ್ತೂರು, ಜೂ. 27: ನಗರದ ಎಪಿಎಂಸಿ ರಸ್ತೆಯ ರೈಲ್ವೆ ಅಂಡರ್‌ಪಾಸ್ ಸಮೀಪದ ಫುಟ್‌ಪಾತ್‌ನಲ್ಲಿ ಸ್ಲಾಬ್ ಇಲ್ಲದಿದ್ದ ಕಾರಣ ಮಹಿಳೆಯೊಬ್ಬರು ಸುಮಾರು ನಾಲ್ಕು ಅಡಿ ಆಳದ ಗುಂಡಿಗೆ ಬಿದ್ದು ಗಾಯಗೊಂಡ ಘಟನೆ ಶನಿವಾರ ರಾತ್ರಿ ನಡೆದಿದೆ.ಮಹಿಳೆ ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಅಂಡರ್‌ಪಾಸ್ ಪ್ರದೇಶದಲ್ಲಿ ಸಮರ್ಪಕ ಬೀದಿ ದೀಪಗಳ ವ್ಯವಸ್ಥೆ ಇಲ್ಲದ ಕಾರಣ ಸ್ಲಾಬ್ ಇಲ್ಲದಿರುವುದನ್ನು ಗಮನಿಸದೆ ಗುಂಡಿಗೆ ಬಿದ್ದಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಗಾಯಗೊಂಡ ಮಹಿಳೆಗೆ ಸ್ಥಳೀಯರು ತಕ್ಷಣ ನೆರವು ನೀಡಿ ಮೇಲಕ್ಕೆ ಎತ್ತಿದ್ದಾರೆ.ಈ ಅಂಡರ್‌ಪಾಸ್‌ನಲ್ಲಿ ಸಮರ್ಪಕ ಬೆಳಕಿನ ವ್ಯವಸ್ಥೆಯ ಕೊರತೆ, ಅಪೂರ್ಣ ಫುಟ್‌ಪಾತ್ ಹಾಗೂ ಸುರಕ್ಷತಾ ಕ್ರಮಗಳ ಅಭಾವದ ಬಗ್ಗೆ ಸಾರ್ವಜನಿಕರು ಹಲವು ಬಾರಿ ಆತಂಕ ವ್ಯಕ್ತಪಡಿಸಿದ್ದರೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಆರೋಪಿಸಲಾಗಿದೆ.ಘಟನೆಯ ಬಳಿಕ ಮತ್ತಷ್ಟು ಅನಾಹುತ ಸಂಭವಿಸದಂತೆ ಸ್ಥಳೀಯರು ಗುಂಡಿಯ ಬಳಿ ಮರದ ಕೊಂಬೆಯನ್ನು ಇರಿಸಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.ಅಂಡರ್‌ಪಾಸ್ ಪ್ರದೇಶದಲ್ಲಿ ತುರ್ತಾಗಿ ಬೀದಿ ದೀಪ ಅಳವಡಿಕೆ, ಫುಟ್‌ಪಾತ್‌ನ ಸ್ಲಾಬ್ ಅಳವಡಿಕೆ ಹಾಗೂ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಸ್ಥಳೀಯರು ಸಂಬಂಧಪಟ್ಟ ಇಲಾಖೆ ಮತ್ತು ಜನಪ್ರತಿನಿಧಿಗಳನ್ನು ಒತ್ತಾಯಿಸಿದ್ದಾರೆ.







