ಮಂಗಳೂರು: ನಗರದ ಸೂಟರ್ಪೇಟೆ ಸಮೀಪ ವೃದ್ಧೆಯೊಬ್ಬರ ಕುತ್ತಿಗೆಯಿಂದ ಸುಮಾರು ₹1.50 ಲಕ್ಷ ಮೌಲ್ಯದ ಚಿನ್ನದ ಸರ ಕಸಿದುಕೊಂಡ ಪ್ರಕರಣವನ್ನು ಮಂಗಳೂರು ದಕ್ಷಿಣ ಠಾಣೆ ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.ಜೂನ್ 14ರಂದು ಮಧ್ಯಾಹ್ನ ಎಕ್ಕೂರು ಬಸ್ ನಿಲ್ದಾಣದಿಂದ ಇಳಿದು ಸೂಟರ್ಪೇಟೆಯ ಗ್ರಾಮ ಲೆಕ್ಕಾಧಿಕಾರಿ ಕಚೇರಿ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ಮೋಟಾರ್‌ಸೈಕಲ್‌ನಲ್ಲಿ ಬಂದ ಇಬ್ಬರು ವಿಳಾಸ ಕೇಳುವ ನೆಪದಲ್ಲಿ ತಡೆದು, ಅವರ ಕುತ್ತಿಗೆಯಲ್ಲಿದ್ದ ಸುಮಾರು 12 ಗ್ರಾಂ ತೂಕದ ಲಕ್ಷ್ಮೀ ಪೆಂಡೆಂಟ್ ಹೊಂದಿದ್ದ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದರು. ಈ ಕುರಿತು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಜೂನ್ 26ರಂದು ಪಾಂಡೇಶ್ವರದ ರೋಸಾರಿಯೋ ಶಾಲೆ ಸಮೀಪ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಸರ ಕಳವು ಕೃತ್ಯದಲ್ಲಿ ತೊಡಗಿದ್ದುದನ್ನು ಒಪ್ಪಿಕೊಂಡಿದ್ದಾರೆ.ಆರೋಪಿಗಳಾದ ಉತ್ತರ ಪ್ರದೇಶ ಮೂಲದ ರವಿ ಬೌರಾ (38) ಹಾಗೂ ಮೊಹಮ್ಮದ್ ಸಾಹಿಲ್ @ ಸಿದ್ದೀಖಿ (26) ಅವರನ್ನು ಬಂಧಿಸಲಾಗಿದೆ. ಬಾಗಲಕೋಟೆ ಮೂಲದ ಅಲ್ತಾಫ್ ಹುಸೈನ್ ಎಂಬಾತನನ್ನು ಠಾಣೆಗೆ ಕರೆತರುತ್ತಿದ್ದ ವೇಳೆ, ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಂಡಿದ್ದಾನೆ. ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ವಿನಾಯಕ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಈ ಸಂಬಂಧವೂ ಪ್ರತ್ಯೇಕ ಪ್ರಕರಣ ದಾಖಲಾಗಿದೆ.ಬಂಧಿತ ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಜುಲೈ 6ರವರೆಗೆ 10 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಪರಾರಿಯಾಗಿರುವ ಅಲ್ತಾಫ್ ಹುಸೈನ್ ಬಂಧನಕ್ಕೆ ವಿಶೇಷ ತಂಡ ರಚಿಸಿ ಶೋಧ ಕಾರ್ಯ ಮುಂದುವರಿಸಲಾಗಿದೆ.ಮಂಗಳೂರು ಕೇಂದ್ರ ಉಪವಿಭಾಗದ ಎಸಿಪಿ ನೇತೃತ್ವದಲ್ಲಿ ಮಂಗಳೂರು ದಕ್ಷಿಣ ಠಾಣೆ ಪೊಲೀಸರು ಪ್ರಕರಣವನ್ನು ತ್ವರಿತವಾಗಿ ಭೇದಿಸಿದ್ದು, ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!