ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ‌ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಹೈಕಮಾಂಡ್​​ಗೆ ಒತ್ತಾಯಿಸಿರುವ ಮಾಜಿ ಸಿಎಂ ಡಿ.ವಿ. ಸದಾನಂದ ಗೌಡರದ್ದು ಎನ್ನಲಾದ ಆಡಿಯೋ ಈಗ ಬಿಜೆಪಿ ಪಾಳೆಯದಲ್ಲಿ ಸದ್ದು ಮಾಡಿದೆ. ಆದರೆ, ಡಿ.ವಿ. ಸದಾನಂದ‌ಗೌಡ ಈ ಆಡಿಯೋ ತನ್ನದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ದೆಹಲಿ ಮಟ್ಟದ ಬಿಜೆಪಿ ನಾಯಕರೊಬ್ಬರ ಜತೆ ಮಾಜಿ ಸಿಎಂ ಸದಾನಂದಗೌಡ ಮಾತನಾಡಿದ್ದಾರೆ ಎನ್ನಲಾದ ಈ ಆಡಿಯೋ ವೈರಲ್ ಆಗಿದೆ. ಆಡಿಯೋದಲ್ಲಿ ಆಗಸ್ಟ್, ಸೆಪ್ಟಂಬರ್, ಅಕ್ಟೋಬರ್ ವರೆಗೂ ವಿಜಯೇಂದ್ರ‌ ಮುಂದುವರೆಯಲು ಬಿಡಿ. ಬಳಿಕ ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದುಹಾಕಿ ಅಂತ ಹೇಳಿರುವ ಆಡಿಯೋ ಇದಾಗಿದೆ. ಈಗಲೇ ತೆಗೆದು ಹಾಕಿದ್ರೆ ಬಿಜೆಪಿ ಮತ್ತೆ ಲಿಂಗಾಯತ ವಿರೋಧಿ ಅಂತ ಟೀಕೆಗೆ ಗುರಿ ಆಗುವ ಅಪಾಯ ಇದೆ. ಇದರಿಂದ ಪಕ್ಷಕ್ಕೆ ಡ್ಯಾಮೇಜ್ ಆಗಬಹುದು. ಹಾಗಾಗಿ ಮುಂದಿನ ಅಕ್ಟೋಬರ್​ವರೆಗೂ ಕಾದು ವಿಜಯೇಂದ್ರ‌ನನ್ನು ಪದವಿಯಿಂದ ತೆಗೆಯುವಂತೆ ಮನವಿ ಮಾಡಿರುವುದು ಆಡಿಯೋದಲ್ಲಿ ಇದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿ. ವಿ. ಸದಾನಂದ ಗೌಡ, ನನ್ನದಲ್ಲದ ಆಡಿಯೋ, ನನ್ನದಲ್ಲದ ವಿಡಿಯೋ ಬಗ್ಗೆ ಮಾತಾಡಲ್ಲ. ನನಗೆ ಈ ಆಡಿಯೋ ಬಗ್ಗೆ ಗೊತ್ತಿಲ್ಲ. ಇದರ ಬಗ್ಗೆ ನೀವೇ ಕಂಡುಹಿಡಿಯಿರಿ. ಮಾಧ್ಯಮಗಳೇ ತನಿಖೆ ಮಾಡಲಿ ಆಡಿಯೋ ಬಗ್ಗೆ. ಇದೊಂದು ಗಂಭೀರ ವಿಚಾರ.‌ ಈ ಆಡಿಯೋ ಬಗ್ಗೆ ನನಗೆ ಗೊತ್ತಿಲ್ಲ. ಗೊತ್ತಿದ್ರೆ ನಾನು ಮಾತನಾಡುತ್ತಿದ್ದೆನಲ್ಲ. ಇದರ ಬಗ್ಗೆ ತನಿಖೆ ಮಾಡೋದು ಬಿಟ್ಟು ಚಾರಿತ್ರ್ಯ ಹರಣ ಮಾಡೋದು ಬೇಡ. ಇದರ ಬಗ್ಗೆ ಸತ್ಯ ಸಂಗತಿಗಳು ಹೊರಗೆ ಬರಲಿ ಅಂತ ನಾನೂ ಬಯಸ್ತೇನೆ ಎಂದು ಸ್ಪಷ್ಟಪಡಿಸಿದರು.

ಪಕ್ಷದಲ್ಲಿ ಏನೇನು ಆಗಬೇಕು ಅಂತ ನಾನು ಪಕ್ಷದ ವೇದಿಕೆಯಲ್ಲಿ ಮಾತಾಡಿದ್ದೇನೆ. ಕೋರ್ ಕಮಿಟಿಯಲ್ಲಿ ಮಾತಾಡಿದ್ದೇನೆ. ಇದರ ಬಗ್ಗೆ ಯಾವುದೇ ತನಿಖೆಗಳು ನಡೆಯಲಿ ಬೇಕಾದರೆ. ನಾನು ಯಾವುದೇ ಸ್ಥಾನಮಾನದ ಅಪೇಕ್ಷಿತ ಅಲ್ಲ. ನನಗೆ ಯಾರೂ ಸ್ಪರ್ಧಿ ಇಲ್ಲ. ಹೈಕಮಾಂಡ್​​ನವ್ರು ಇದರ ಬಗ್ಗೆ ಕೇಳಿದರೆ ಮಾತ್ರ ನಾನು ಮಾತಾಡ್ತೇನೆ.‌ ನಾನು ಇದರ ಬಗ್ಗೆ ಎಲ್ಲೂ ಚರ್ಚೆ ಮಾಡಲ್ಲ ಎಂದು ಹೇಳಿದ್ರು.

Leave a Reply

Your email address will not be published. Required fields are marked *

Join WhatsApp Group
error: Content is protected !!