ಪುತ್ತೂರು: ಎಸ್.ಆರ್.ಕೆ. ಲ್ಯಾಡರ್ಸ್ ಸಂಸ್ಥೆಯ ಮಾಲಕ ಹಾಗೂ ಕೃಷಿ ಉಪಕರಣಗಳ ಸಂಶೋಧಕ ಕೇಶವ ಅಮೈ ಅವರಿಗೆ ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನದಿಂದ ಪ್ರದಾನವಾಗುವ ಪ್ರತಿಷ್ಠಿತ ‘ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿ’ ಪ್ರದಾನಗೊಂಡಿದೆ.ಬೆಂಗಳೂರಿನ ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಭಾರತದ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಕೇಶವ ಅಮೈ ದಂಪತಿಗೆ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಹಾಗೂ ವಿ. ಸೋಮಣ್ಣ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.ಕೃಷಿಕರಿಗೆ ಅನುಕೂಲವಾಗುವ ಹಗುರವಾದ ಏಣಿಗಳು, ಕರಿಮೆಣಸು ಬೇರ್ಪಡಿಸುವ ಯಂತ್ರ, ಅಡಿಕೆ ಗೊನೆ ಬೇರ್ಪಡಿಸುವ ಯಂತ್ರ ಸೇರಿದಂತೆ ಹಲವು ಕೃಷಿ ಉಪಕರಣಗಳನ್ನು ಅಭಿವೃದ್ಧಿಪಡಿಸಿರುವ ಸಾಧನೆಯನ್ನು ಗುರುತಿಸಿ ಕೇಶವ ಅಮೈ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.ಪ್ರಶಸ್ತಿ ಸ್ವೀಕರಿಸಿ ಪುತ್ತೂರಿಗೆ ಆಗಮಿಸಿದ ಕೇಶವ ಅಮೈ ಅವರಿಗೆ ದರ್ಬೆಯಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ಬಳಿಕ ತೆರೆದ ವಾಹನದಲ್ಲಿ ಮುಕ್ರಂಪಾಡಿಯ ಎಸ್.ಆರ್.ಕೆ. ಲ್ಯಾಡರ್ಸ್ ಕಚೇರಿವರೆಗೆ ಭವ್ಯ ಮೆರವಣಿಗೆ ನಡೆಯಿತು. ಲ್ಯಾಡರ್‌ಗಳನ್ನು ಹೊತ್ತ ಪಿಕಪ್ ವಾಹನಗಳು, ಚೆಂಡೆ ವಾದನ ಹಾಗೂ ಅಭಿಮಾನಿಗಳ ಸಂಭ್ರಮ ಮೆರವಣಿಗೆಗೆ ವಿಶೇಷ ಮೆರುಗು ನೀಡಿದವು.ಈ ಸಂದರ್ಭದಲ್ಲಿ ಕೇಶವ ಅಮೈ ಅವರ ಪತ್ನಿ ಮಾಲತಿ, ಪುತ್ರ, ವಿವಿಧ ಸಂಘಟನೆಗಳ ಪ್ರಮುಖರು, ಉದ್ಯಮಿಗಳು, ಸಿಬ್ಬಂದಿ ವರ್ಗ ಹಾಗೂ ನೂರಾರು ಅಭಿಮಾನಿಗಳು ಭಾಗವಹಿಸಿ ಅಭಿನಂದಿಸಿದರು.






