ಪುತ್ತೂರು: ದಕ್ಷಿಣ ಕನ್ನಡ ಮ್ಯೂಚುವಲ್ ಬೆನಿಫಿಟ್ ನಿಧಿ ಲಿಮಿಟೆಡ್ ವತಿಯಿಂದ ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಾಷ್ಟ್ರಸೇವೆಯಲ್ಲಿ ತಮ್ಮ ಅಮೂಲ್ಯ ಬದುಕನ್ನು ಸಮರ್ಪಿಸಿದ ನಿವೃತ್ತ ಸೈನಿಕರಿಗೆ ಗೌರವ ಸನ್ಮಾನ ಕಾರ್ಯಕ್ರಮವನ್ನು ಆ.14ರಂದು ಬೊಳ್ವಾರು ಇಸ್ಟ್ಯಾಂಡ್‌ನ ಮಯೂರ ಸಂಕೀರ್ಣದಲ್ಲಿರುವ ಸಂಸ್ಥೆಯ ಕಚೇರಿಯಲ್ಲಿ ಆಯೋಜಿಸಲಾಯಿತು.ಮಾಜಿ ಸೈನಿಕರ ಸಂಘದ ಅಧ್ಯಕ್ಷ ವಸಂತ್ ಕುಮಾರ್ ಬಿ. ಅವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ದೇಶದ ರಕ್ಷಣೆಯಲ್ಲಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟು ಹುತಾತ್ಮರಾದ ವೀರ ಯೋಧರನ್ನು ಸ್ಮರಿಸಿ ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ. ದೇಶದ ಸೈನಿಕರು ಹಗಲಿರುಳು ದೇಶದ ರಕ್ಷಣೆಯಲ್ಲಿ ತೊಡಗಿರುವುದರಿಂದಲೇ ನಾವೆಲ್ಲರೂ ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ. ಯುವಜನರಲ್ಲಿ ದೇಶಪ್ರೇಮ ಮತ್ತು ದೇಶಭಕ್ತಿಯ ಕುರಿತು ಜಾಗೃತಿ ಮೂಡಿಸುವ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಹೇಳಿದರು. ಕಾರ್ಯಕ್ರಮ ಆಯೋಜಿಸಿದ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಕೆ. ಸುಂದರ ಗೌಡ ಮಾತನಾಡಿ, ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಷ್ಟ್ರಪ್ರೇಮವನ್ನು ಬಿಂಬಿಸುವ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ಸದೃಢ ರಾಷ್ಟ್ರ ನಿರ್ಮಾಣಕ್ಕೆ ಇಂತಹ ಕಾರ್ಯಕ್ರಮಗಳು ಉತ್ತಮ ಸಂದೇಶ ನೀಡುತ್ತವೆ. ದಿನದ 24 ಗಂಟೆಯೂ ದೇಶದ ರಕ್ಷಣೆಯಲ್ಲಿ ತೊಡಗಿರುವ ಸೈನಿಕರನ್ನು ಗುರುತಿಸಿ ಗೌರವಿಸುವ ಕಾರ್ಯ ಅಭಿನಂದನೀಯ. ಕಳೆದ ವರ್ಷವೂ ಸಂಸ್ಥೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇವೆ. ಮುಂದೆಯೂ ಇಂತಹ ರಾಷ್ಟ್ರೀಯ ಕಾರ್ಯಕ್ರಮಗಳಿಗೆ ನಿರಂತರವಾಗಿ ಹಾಜರಾಗುತ್ತೇವೆ ಎಂದರು. ನಿವೃತ್ತ ಯೋಧ ಡಿ. ಅಮ್ಮಣ್ಣ ರೈ ಅವರು ಕೂಡ ಶುಭ ಹಾರೈಸಿದರು.ಬಳಿಕ ನಿವೃತ್ತ ಯೋಧರಿಗೆ ಸನ್ಮಾನ ನೆರವೇರಿಸಲಾಯಿತು. ಸೇನೆಯಲ್ಲಿ 18 ವರ್ಷಗಳ ಕಾಲ ಸೇವೆ ಸಲ್ಲಿಸಿದ ಚಂದ್ರಶೇಖರ ಉರಿಕ್ಯಾಡಿ, 24 ವರ್ಷ ಸೇವೆ ಸಲ್ಲಿಸಿದ ಶಾಂತಿಗೋಡು ನಿವಾಸಿ ವಿಶ್ವನಾಥ ಎಂ. ಹಾಗೂ 24 ವರ್ಷ ಸೇವೆ ಸಲ್ಲಿಸಿದ ಪಡೂರು ಗ್ರಾಮದ ಅಶೋಕ ನೆಲಪಾಲು ಅವರನ್ನು ಅತಿಥಿಗಳು ಸನ್ಮಾನಿಸಿದರು. ಇದೇ ವೇಳೆ ಜಯರಾಮ್, ವೀರನಾರಿ ಜಯಶ್ರೀ ಭಟ್, ನಾಗಪ್ಪ ಹಾಗೂ ವಸಂತ ಕುಮಾರ್ ಭಟ್ ಅವರನ್ನೂ ಗೌರವಿಸಲಾಯಿತು.ದ.ಕ. ಮ್ಯೂಚುವಲ್ ಬೆನಿಫಿಟ್ ನಿಧಿಯ ಶಾಖಾ ಅಧ್ಯಕ್ಷ ಪುನೀತ್ ವಿ.ಜೆ. ಮಾತನಾಡಿ, 80ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ರಾಷ್ಟ್ರರಕ್ಷಣೆಯಲ್ಲಿ ಮುಂಚೂಣಿಯಲ್ಲಿ ಸೇವೆ ಸಲ್ಲಿಸಿದ ವೀರ ಯೋಧರನ್ನು ಗೌರವಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಸ್ವಾತಂತ್ರ್ಯ ದಿನದಂದು ಯೋಧರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿ ಒಂದು ದಿನ ಮುಂಚಿತವಾಗಿ ಕಾರ್ಯಕ್ರಮ ನಡೆಸಲಾಗಿದೆ. ಸಂಸ್ಥೆಯ ವತಿಯಿಂದ ಸೈನಿಕ ಬಂಧುಗಳನ್ನು ಸನ್ಮಾನಿಸುತ್ತಿರುವುದು ಇದು ಮೂರನೇ ಬಾರಿಯಾಗಿದೆ. ಇಂತಹ ಕಾರ್ಯಕ್ರಮಗಳು ಉತ್ತಮ ಸಂವಹನ ಮತ್ತು ಸಂಪರ್ಕಕ್ಕೆ ಕೊಂಡಿಯಾಗುತ್ತವೆ ಎಂದರು.ಸಂಸ್ಥೆಯು ಈಗಾಗಲೇ 16ರಿಂದ 20 ಶಾಖೆಗಳನ್ನು ಹೊಂದಿದ್ದು, ಗ್ರಾಹಕರು ಹಾಗೂ ಸಮಾಜದ ವಿವಿಧ ವರ್ಗಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ ಎಂದು ಅವರು ತಿಳಿಸಿದರು.ಸಂಸ್ಥೆಯ ಸಿಬ್ಬಂದಿ ಕವಿತಾ ಪ್ರಾರ್ಥನೆ ನೆರವೇರಿಸಿದರು. ಪೂಜಾ ಸ್ವಾಗತಿಸಿದರು. ಅರ್ಪಿತಾ, ವಿಕ್ಷೀತಾ, ರಕ್ಷಿತಾ, ಸದಾಶಿವ ಹಾಗೂ ಚೇತನ್ ಕಾರ್ಯಕ್ರಮದ ವಿವಿಧ ಜವಾಬ್ದಾರಿಗಳಲ್ಲಿ ಸಹಕರಿಸಿದರು.











