ಪುತ್ತೂರು: 34ನೇ ನೆಕ್ಕಿಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಂತಿನಗರದಲ್ಲಿರುವ ಘನ ತ್ಯಾಜ್ಯ ನಿರ್ವಹಣಾ ಘಟಕದ ತ್ಯಾಜ್ಯ ವಿಲೇವಾರಿ ಅವ್ಯವಸ್ಥೆ ವಿರುದ್ಧ ಪ್ರತಿಭಟನೆ ನಡೆಸಲು ಸ್ಥಳೀಯರು ನಿರ್ಧರಿಸಿದ್ದಾರೆ.ಶಾಂತಿನಗರ ಸಮೀಪದ ಕಲ್ಪಣೆ ಬಳಿ ಇರುವ ಘನ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಪ್ಲಾಸ್ಟಿಕ್‌ ಕಸ, ಸ್ಯಾನಿಟರಿ ಪ್ಯಾಡ್‌, ಪ್ಯಾಂಪರ್ಸ್‌ ಸೇರಿದಂತೆ ಹಸಿ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಬದಲು ಘಟಕದ ಹಿಂಭಾಗದಲ್ಲಿ ಗುಂಡಿ ತೋಡಿ ಮಣ್ಣಿನಲ್ಲಿ ಮುಚ್ಚಲಾಗುತ್ತಿದೆ. ಈ ಬಗ್ಗೆ ಗಮನಕ್ಕೆ ಬಂದರೂ 34ನೇ ನೆಕ್ಕಿಲಾಡಿ ಗ್ರಾಮ ಪಂಚಾಯತ್ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿಲ್ಲ. ತಕ್ಷಣವೇ ಈ ಕುರಿತು ಕ್ರಮ ಕೈಗೊಳ್ಳದೇ ಇದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಸಮಾನ ಮನಸ್ಕರು ತಿಳಿಸಿದ್ದಾರೆ.

*ಅವ್ಯವಸ್ಥೆ ವಿರುದ್ಧ ಆಕ್ರೋಶ:*

ಸ್ವಚ್ಛ ಗ್ರಾಮ ಪ್ರಶಸ್ತಿ ಪಡೆದಿರುವ 34ನೇ ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಂತಿನಗರ ಸಮೀಪದ ಕಲ್ಪಣೆ ಬಳಿ ಇರುವ ಘನ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ತ್ಯಾಜ್ಯ ವಿಲೇವಾರಿ ಅವ್ಯವಸ್ಥೆಯಾಗಿದೆ.ಪ್ಲಾಸ್ಟಿಕ್‌ ಕಸ, ಸ್ಯಾನಿಟರಿ ಪ್ಯಾಡ್‌, ಪ್ಯಾಂಪರ್ಸ್‌ ಸೇರಿದಂತೆ ಹಸಿ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಬದಲು ಘಟಕದ ಹಿಂಭಾಗದಲ್ಲಿ ಗುಂಡಿ ತೋಡಿ ಮಣ್ಣಿನಲ್ಲಿ ಮುಚ್ಚಲಾಗುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಗ್ರಾಮ ಪಂಚಾಯತ್ ವತಿಯಿಂದ ಮನೆ ಮನೆಗೆ ತೆರಳಿ ತ್ಯಾಜ್ಯ ಸಂಗ್ರಹಿಸಿ ಅದನ್ನು ವಿಂಗಡಿಸಿ ಎಂಆರ್‌ಎಫ್‌ ಘಟಕದ ಮೂಲಕ ವಿಲೇವಾರಿ ಮಾಡುವ ವ್ಯವಸ್ಥೆ ಜಾರಿಯಲ್ಲಿದೆ. ಇದಕ್ಕಾಗಿ ಸಾರ್ವಜನಿಕರಿಂದ ತ್ಯಾಜ್ಯ ನಿರ್ವಹಣಾ ಶುಲ್ಕ ಸಂಗ್ರಹಿಸಲಾಗುತ್ತಿದೆ. ಆದರೆ ಘಟಕದಲ್ಲಿ ತ್ಯಾಜ್ಯದ ರಾಶಿ ಹೆಚ್ಚಾಗುತ್ತಿದ್ದರೂ ಸೂಕ್ತ ವಿಲೇವಾರಿ ವ್ಯವಸ್ಥೆ ಮಾಡದೆ ಭೂಮಿಯೊಳಗೆ ಹೂತು ಹಾಕಲಾಗುತ್ತಿದೆ. ಇದು ಕಾನೂನಿಗೆ ವಿರುದ್ಧವಾಗಿದೆ. ಘಟಕಕ್ಕೆ ಕಸಾಯಿಖಾನೆಗಳ ತ್ಯಾಜ್ಯ ಸೇರಿದಂತೆ ಮಾಂಸ ಹಾಗೂ ವಿವಿಧ ಆಹಾರ ತ್ಯಾಜ್ಯಗಳು ಬರುತ್ತಿದ್ದು ಅವುಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ ಪರಿಣಾಮ ಪರಿಸರದಲ್ಲಿ ದುರ್ವಾಸನೆ ಬೀರುತ್ತಿದೆ. ತ್ಯಾಜ್ಯದ ರಾಶಿಯಿಂದ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿದ್ದು ಶಾಲೆಗೆ ತೆರಳುವ ಮಕ್ಕಳು ಸೇರಿದಂತೆ ಸ್ಥಳೀಯರು ಆತಂಕದಿಂದ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸುಮಾರು ಮೂರು–ನಾಲ್ಕು ವರ್ಷಗಳ ಹಿಂದೆ ಘಟಕ ಆರಂಭಗೊಂಡಾಗ ಒಣ ತ್ಯಾಜ್ಯ ಸಂಗ್ರಹಿಸಿ ವಿಂಗಡಿಸುವ ವ್ಯವಸ್ಥೆ ಇತ್ತು. ಬಳಿಕ ಹಸಿ ತ್ಯಾಜ್ಯದಿಂದ ಗೊಬ್ಬರ ತಯಾರಿಸುವ ಘಟಕವನ್ನೂ ಆರಂಭಿಸಲಾಗಿತ್ತು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆಗಳಿಂದ ಹಸಿ ಕಸ ಸಂಗ್ರಹಿಸಿ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಯೋಜನೆಯೂ ರೂಪಿಸಲಾಗಿತ್ತು. ಆದರೆ ಕಳೆದ ಕೆಲವು ಸಮಯದಿಂದ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಸುಮಾರು ಎರಡು ವರ್ಷಗಳಿಂದ ಸಂಗ್ರಹವಾಗಿರುವ ಪ್ಲಾಸ್ಟಿಕ್‌ ತ್ಯಾಜ್ಯವೂ ಘಟಕದಲ್ಲೇ ಉಳಿದಿದೆ. ಸದ್ಯ ಸಂಗ್ರಹವಾಗುವ ಹಸಿ ತ್ಯಾಜ್ಯವನ್ನು ಗೊಬ್ಬರ ತಯಾರಿಕಾ ಘಟಕಕ್ಕೆ ಸಮರ್ಪಕವಾಗಿ ಬಳಸುವ ಬದಲು ಘಟಕದ ಹಿಂಭಾಗದಲ್ಲಿ ತೋಡಿರುವ ಗುಂಡಿಯಲ್ಲಿ ಹಾಕಿ ಮಣ್ಣಿನಿಂದ ಮುಚ್ಚಲಾಗುತ್ತಿದೆ. ಇದರಿಂದ ಶಾಂತಿನಗರ ಪರಿಸರದಲ್ಲಿ ಆತಂಕ ಸೃಷ್ಟಿಯಾಗಿದೆ.ಅಂಗನವಾಡಿ ಕೇಂದ್ರ, ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ದೇವಸ್ಥಾನ, ಹಿಂದೂ ರುದ್ರಭೂಮಿ ಹಾಗೂ ನೂರಾರು ಮನೆಗಳಿರುವ ಶಾಂತಿನಗರ ಪ್ರದೇಶದಲ್ಲಿ ಈ ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.ಘಟಕ ಸ್ಥಾಪನೆಯ ಸಂದರ್ಭದಲ್ಲಿಯೇ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದರೂ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಿಸುವ ಭರವಸೆ ನೀಡಲಾಗಿತ್ತು. ಆದರೆ ಇದೀಗ ತ್ಯಾಜ್ಯವನ್ನು ಭೂಮಿಯೊಳಗೆ ಹೂತು ಹಾಕುತ್ತಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.ಹಸಿ ಹಾಗೂ ಇತರ ತ್ಯಾಜ್ಯವನ್ನು ಅವೈಜ್ಞಾನಿಕವಾಗಿ ಹೂತು ಹಾಕುವುದರಿಂದ ಮಣ್ಣು ಮತ್ತು ಅಂತರ್ಜಲ ಕಲುಷಿತಗೊಳ್ಳುವ ಸಾಧ್ಯತೆ ಇದ್ದು ಸಾಂಕ್ರಾಮಿಕ ರೋಗಗಳ ಭೀತಿಯೂ ಎದುರಾಗಿದೆ. ಈ ಬಗ್ಗೆ ಪಂಚಾಯಿತಿಗೆ ಹಲವು ಬಾರಿ ದೂರು ನೀಡಿದರೂ ಸಮಸ್ಯೆ ಬಗೆ ಹರಿದಿಲ್ಲ. ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಶುಲ್ಕ ಸಂಗ್ರಹಿಸುತ್ತಿರುವ ಹಿನ್ನೆಲೆಯಲ್ಲಿ ಸಂಗ್ರಹವಾಗುವ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದು ಪಂಚಾಯಿತಿಯ ಜವಾಬ್ದಾರಿಯಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಮಸ್ಯೆಗೆ ತಕ್ಷಣ ಶಾಶ್ವತ ಪರಿಹಾರ ಕಲ್ಪಿಸಬೇಕು. ಇಲ್ಲದಿದ್ದರೆ ಪಂಚಾಯತ್ ಕಚೇರಿ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಕುರಿತು ಈಗಾಗಲೇ ಶಾಂತಿನಗರ ಶ್ರೀ ಮಹಾವಿಷ್ಣು ಸೇವಾ ಟ್ರಸ್ಟ್, ಶ್ರೀ ಸತ್ಯನಾರಾಯಣ ಪೂಜಾ ಸಮಿತಿ, ತ್ರಿವೇಣಿ ಯುವಕ ಮಂಡಲ ಮುಂತಾದ ಸಂಘ ಸಂಸ್ಥೆಗಳ ಸದಸ್ಯರು ಚರ್ಚೆ ನಡೆಸಿದ್ದಾರೆ‌.

Leave a Reply

Your email address will not be published. Required fields are marked *

Join WhatsApp Group
error: Content is protected !!