ಪುತ್ತೂರು: ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜು ಹಾಗೂ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ. ಫಾ. ಅಶೋಕ್ ರಾಯನ್ ಕ್ರಾಸ್ತಾ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸ್ವಾತಂತ್ರ್ಯಾನಂತರ ದೇಶವು ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಿದ್ದು, ಶಿಕ್ಷಣದ ಮಟ್ಟವೂ ಹೆಚ್ಚಾಗಿದೆ. ಸಾಕ್ಷರತೆ ಹೆಚ್ಚುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಪಡೆಯಲು ಅವಕಾಶಗಳು ವಿಸ್ತರಿಸಿವೆ. “ನಮ್ಮಿಂದಲೇ ಬದಲಾವಣೆಯನ್ನು ಆರಂಭಿಸೋಣ. ಸಮಾಜಕ್ಕೆ ಏನು ಮಾಡಬೇಕು ಹಾಗೂ ಉತ್ತಮ ರಾಷ್ಟ್ರವನ್ನು ಹೇಗೆ ನಿರ್ಮಿಸಬೇಕು ಎಂಬುದನ್ನು ಅರಿತು ಕಾರ್ಯನಿರ್ವಹಿಸೋಣ” ಎಂದು ಕರೆ ನೀಡಿದರು.ಉಪ ಪ್ರಾಂಶುಪಾಲ ಡಾ. ವಿಜಯ್ ಕುಮಾರ್ ಎಂ. ಸ್ವಾತಂತ್ರ್ಯ ದಿನಾಚರಣೆಯ ಸಂದೇಶ ನೀಡಿದರು. ಯಂತ್ರಗಳು ಮನುಷ್ಯರಿಗಿಂತ ವೇಗವಾಗಿ ಯೋಚಿಸಿ ಬರೆಯಬಲ್ಲವಾದರೂ ಅವುಗಳಿಗೆ ವಿವೇಕವಿಲ್ಲ. ದೇಶ ನಿರ್ಮಾಣಕ್ಕೆ ಕೇವಲ ಪದವಿ ಪ್ರಮಾಣಪತ್ರ ಸಾಕಾಗುವುದಿಲ್ಲ; ದೈಹಿಕ ಹಾಗೂ ಮಾನಸಿಕ ಶಕ್ತಿಯೂ ಅಗತ್ಯ. ವಿದ್ಯಾರ್ಥಿಗಳು ದೈನಂದಿನ ಜೀವನದಲ್ಲಿ ಕ್ರೀಡೆ, ಯೋಗ, ವ್ಯಾಯಾಮ ಹಾಗೂ ಸಕಾರಾತ್ಮಕ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು. ಸೋಲುಗಳಿಗೆ ಹೆದರದೆ ಮುನ್ನಡೆಯಬೇಕು ಎಂದು ಹೇಳಿದರು.ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲ ವಂ. ಫಾ. ಡಾ. ಆಂಟೋನಿ ಪ್ರಕಾಶ್ ಮೊಂತೆರೊ ಮಾತನಾಡಿ, ದೈವಿಕ ಕೃಪೆ, ಪವಿತ್ರತೆ ಮತ್ತು ಸಮೃದ್ಧಿ ಎಂಬ ಮೂರು ಪದಗಳನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ಪವಿತ್ರತೆ ಹಾಗೂ ಸಮೃದ್ಧಿಯೊಂದಿಗೆ ದೇವರ ಕೃಪೆಯನ್ನು ಅರಿತು ದೇಶದ ಅಭಿವೃದ್ಧಿಗೆ ಕೊಡುಗೆ ನೀಡೋಣ ಎಂದು ಹಾರೈಸಿದರು.ಫಾದರ್ ಪತ್ರಾವೋ ಆಸ್ಪತ್ರೆಯ ಕೌನ್ಸೆಲರ್ ಚಂದನ್ ಸಿ. ಅಂಚನ್ ಅವರು ‘ನಶಾ ಮುಕ್ತ ಭಾರತ’ ಅಭಿಯಾನದ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭ ನೆರವೇರಿಸಿದರು.ಕಾರ್ಯಕ್ರಮದಲ್ಲಿ 3/19 ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ, 5 ಕರ್ನಾಟಕ ನೇವಲ್ ಎನ್‌ಸಿಸಿ ಯೂನಿಟ್, ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್), ರೋವರ್ಸ್ ಅಂಡ್ ರೇಂಜರ್ಸ್, ಯೂತ್ ರೆಡ್ ಕ್ರಾಸ್, ಪರ್ಫಾರ್ಮಿಂಗ್ ಆರ್ಟ್ಸ್ ಹಾಗೂ ಬ್ಯಾಂಡ್ ಟ್ರೂಪ್‌ಗಳು ಭಾಗವಹಿಸಿದವು. ದಿಗಂತ್ ವಿ.ಎಸ್. ಪೆರೇಡ್‌ನ ನೇತೃತ್ವ ವಹಿಸಿದರು.ಎನ್‌ಸಿಸಿ ಕ್ಯಾಪ್ಟನ್ ಜಾನ್ಸನ್ ಡೇವಿಡ್ ಸಿಕ್ವೆರಾ, ಸಬ್ ಲೆಫ್ಟಿನೆಂಟ್ ತೇಜಸ್ವಿ, ಐಕ್ಯೂಎಸಿ ಸಂಯೋಜಕ ಡಾ. ಎಡ್ವಿನ್ ಎಸ್. ಡಿಸೋಜಾ, ಶೈಕ್ಷಣಿಕ ಕುಲಸಚಿವ ಡಾ. ನೋರ್ಬಟ್ ಮಸ್ಕರೇನ್ಹಸ್, ಪರೀಕ್ಷಾಂಗ ಕುಲಸಚಿವ ಡಾ. ವಿನಯಚಂದ್ರ, ಲಲಿತಕಲಾ ಸಂಘದ ಸಂಚಾಲಕ ಪ್ರಶಾಂತ್ ರೈ ಹಾಗೂ ಪಿಆರ್‌ಒ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಪದವಿ ಹಾಗೂ ಪದವಿ ಪೂರ್ವ ಕಾಲೇಜಿನ ಲಲಿತಕಲಾ ಸಂಘದ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ಡಿಂಪಲ್ ಫೆರ್ನಾಂಡಿಸ್ ವಂದಿಸಿದರು. ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಪೂಜಾಶ್ರೀ ವಿ. ರೈ ಕಾರ್ಯಕ್ರಮ ನಿರೂಪಿಸಿದರು.











