ಬಂಟ್ವಾಳ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಗೆ 2 ವರ್ಷ 6 ತಿಂಗಳ ಸಜೆ ಹಾಗೂ ₹40 ಸಾವಿರ ದಂಡ ವಿಧಿಸಿ ಮಂಗಳೂರು ವಿಶೇಷ ತ್ವರಿತ ನ್ಯಾಯಾಲಯ (FTSC-I) ತೀರ್ಪು ನೀಡಿದೆ.ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2025ರ ಜೂನ್ 23ರಂದು ನಡೆದ ಘಟನೆಯ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 79/2025ರಡಿ ಪೋಕ್ಸೋ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿತ್ತು.ಪ್ರಕರಣದ ತನಿಖೆಯನ್ನು ಅಂದಿನ ತನಿಖಾಧಿಕಾರಿಗಳಾದ ಪಿಎಸ್ಐ ಕೀರಪ್ಪ ಘಟಕಾಂಬಳೆ ಹಾಗೂ ಪಿಎಸ್ಐ ಕೃಷ್ಣಕಾಂತ ಪಾಟೀಲ್ ನಡೆಸಿ, ಮಣಿನಾಲ್ಕೂರು ನಿವಾಸಿ ಮೋನಪ್ಪ ನಾಯ್ಕ (52) ವಿರುದ್ಧ ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರು ಎಫ್‌ಟಿಎಸ್‌ಸಿ-1 ನ್ಯಾಯಾಲಯದ ನ್ಯಾಯಾಧೀಶ ಮೋಹನ್ ಜೆ.ಎಸ್. ಅವರು ಆರೋಪಿಗೆ ವಿವಿಧ ಕಲಂಗಳಡಿ ಶಿಕ್ಷೆ ಹಾಗೂ ದಂಡ ವಿಧಿಸಿದ್ದು, ಎಲ್ಲ ಶಿಕ್ಷೆಗಳು ಏಕಕಾಲದಲ್ಲಿ (Concurrent) ಜಾರಿಯಾಗುವಂತೆ ಆದೇಶಿಸಿದ್ದಾರೆ.ಅದರಂತೆ ಆರೋಪಿಗೆ 2 ವರ್ಷ 6 ತಿಂಗಳ ಜೈಲು ಶಿಕ್ಷೆ ಹಾಗೂ ಒಟ್ಟು ₹40 ಸಾವಿರ ದಂಡ ವಿಧಿಸಲಾಗಿದೆ.ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕಿ ಸಹನಾದೇವಿ ಅವರು ಸರ್ಕಾರದ ಪರವಾಗಿ ಸಮರ್ಥವಾಗಿ ವಾದ ಮಂಡಿಸಿದ್ದರು.









