ಪುತ್ತೂರು: ಪುತ್ತೂರು–ಉಪ್ಪಿನಂಗಡಿ ರಸ್ತೆಯ 34ನೇ ನೆಕ್ಕಿಲಾಡಿಯ ವನಸುಮ ನರ್ಸರಿ ಸಮೀಪ ನಿರ್ಮಾಣವಾಗಿರುವ ದೊಡ್ಡ ಹಾಗೂ ಅಪಾಯಕಾರಿ ಹೊಂಡಗಳನ್ನು ಕೂಡಲೇ ಮುಚ್ಚುವಂತೆ ಹಾಗೂ ಪುತ್ತೂರು–ಸುಬ್ರಹ್ಮಣ್ಯ ರಸ್ತೆಯ ಬೆದ್ರಾಳ ಭಾಗದಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ಉಂಟಾಗಿರುವ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸುವಂತೆ ಒತ್ತಾಯಿಸಲಾಗಿದೆ.ಬೆದ್ರಾಳ ರಸ್ತೆಯಲ್ಲಿ ವರ್ಷದಲ್ಲಿ ಮೂರು ಬಾರಿ ಇಂಟರ್‌ಲಾಕ್ ದುರಸ್ತಿ ಕಾಮಗಾರಿ ನಡೆದಿದ್ದರೂ, ಕಳೆದ 15 ದಿನಗಳಿಂದ ಬ್ಯಾರಿಕೇಡ್ ತೆರವುಗೊಳಿಸದೇ ಇರುವುದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದೆ. ಕೂಡಲೇ ಬ್ಯಾರಿಕೇಡ್ ತೆರವುಗೊಳಿಸಿ, ಮಳೆಗಾಲ ಮುಗಿದ ಬಳಿಕ ಇಂಟರ್‌ಲಾಕ್ ತೆರವುಗೊಳಿಸಿ ಶಾಶ್ವತ ಕಾಂಕ್ರೀಟ್ ಅಥವಾ ಡಾಂಬರು ರಸ್ತೆ ನಿರ್ಮಿಸುವಂತೆ ಆಗ್ರಹಿಸಲಾಗಿದೆ.ಅಲ್ಲದೆ, ಬೆದ್ರಾಳದಿಂದ ಸರ್ವೆವರೆಗೆ ರಸ್ತೆಯಲ್ಲಿರುವ ಅಪಾಯಕಾರಿ ಹೊಂಡಗಳನ್ನು ತಕ್ಷಣ ಮುಚ್ಚಬೇಕು. ರಸ್ತೆ ಬದಿಯ ಮೋರಿಗಳ ಕಾಮಗಾರಿ ಅಪೂರ್ಣವಾಗಿರುವುದರಿಂದ ಮೋರಿಯ ನೀರು ನೇರವಾಗಿ ರಸ್ತೆಗೆ ಹರಿದು ರಸ್ತೆ ಹಾನಿಗೊಳಗಾಗುತ್ತಿದೆ. ಆದ್ದರಿಂದ ಮೋರಿ ಕಾಮಗಾರಿಯನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ.ಮಳೆ ವೇಳೆ ಹೊಂಡಗಳಲ್ಲಿ ನೀರು ತುಂಬಿಕೊಳ್ಳುವುದರಿಂದ ವಾಹನ ಸವಾರರಿಗೆ ಹೊಂಡಗಳು ಗೋಚರಿಸದೇ ಅಪಘಾತ ಸಂಭವಿಸುವ ಅಪಾಯ ಹೆಚ್ಚಾಗಿದೆ. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಸಮಸ್ಯೆಗೆ ತಕ್ಷಣ ಪರಿಹಾರ ಕಲ್ಪಿಸಬೇಕೆಂದು ಒತ್ತಾಯಿಸಲಾಗಿದೆ.ಈ ಕುರಿತು ಲೋಕೋಪಯೋಗಿ ಇಲಾಖೆ (PWD) ಮುಖ್ಯ ಅಭಿಯಂತರ ರಾಜೇಶ್ ರೈ ಅವರೊಂದಿಗೆ ಚರ್ಚಿಸಿ, ಸಂಬಂಧಿತ ಅಧಿಕಾರಿಗಳಿಗೆ ರಸ್ತೆ ಹೊಂಡಗಳನ್ನು ಶೀಘ್ರ ಮುಚ್ಚಿ ಅಗತ್ಯ ದುರಸ್ತಿ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿಸಲಾಗಿದೆ.ಈ ಸಂದರ್ಭದಲ್ಲಿ ಟ್ರಸ್ಟ್‌ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಹಾಗೂ ಪದಾಧಿಕಾರಿಗಳಾದ ಉಮೇಶ್ ಕೋಡಿಬೈಲು, ಪ್ರಶಾಂತ್ ನೆಕ್ಕಿಲಾಡಿ, ರಾಜು ಶೆಟ್ಟಿ ಮತ್ತು ಮನೀಶ್ ಕುಲಾಲ್ ಉಪಸ್ಥಿತರಿದ್ದರು.









