ಪುತ್ತೂರು: ಗುಟ್ಕಾ ನಿಷೇಧ ಹಿಂಪಡೆದ ಸರ್ಕಾರದ ಕ್ರಮವನ್ನು ಸ್ವಾಗತಿಸುತ್ತೇನೆ. ಗುಟ್ಕಾ ನಿಷೇಧದ ವಿಚಾರದಲ್ಲಿ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರ ಕೈಗೊಳ್ಳುವ ಯಾವುದೇ ನಿರ್ಧಾರವನ್ನು ಅಡಿಕೆ ಬೆಳೆಗಾರರು ವಿರೋಧಿಸುವುದಿಲ್ಲ. ಆದರೆ ಇಂತಹ ನೀತಿಯ ಪರಿಣಾಮ ಅಡಿಕೆ ಕೃಷಿಕರ ಭದ್ರತೆಯ ಮೇಲೂ ಬೀಳದಂತೆ ಸರ್ಕಾರ ಗಮನಹರಿಸಬೇಕು ಎಂದು ಅಡಿಕೆ ಬೆಳೆಗಾರ ಆರ್.ಸಿ. ನಾರಾಯಣ್ ರೆಂಜ ಆಗ್ರಹಿಸಿದ್ದಾರೆ.ಭಾರತದಲ್ಲಿ 11.06 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 14 ಲಕ್ಷ ಟನ್ ಅಡಿಕೆ ಉತ್ಪಾದನೆಯಾಗುತ್ತಿದೆ. ಇದರಲ್ಲಿ ಕರ್ನಾಟಕದ ಪಾಲು 6.76 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 10 ಲಕ್ಷ ಟನ್. ದೇಶದ ಒಟ್ಟು ಅಡಿಕೆ ಉತ್ಪಾದನೆಯಲ್ಲಿ ಕರ್ನಾಟಕವೇ ಪ್ರಥಮ ಸ್ಥಾನದಲ್ಲಿದೆ.ಇದೇ ಅವಧಿಯಲ್ಲಿ ಅಡಿಕೆಯ ಅಂದಾಜು ದೇಶೀಯ ಮಾರುಕಟ್ಟೆ ಮೌಲ್ಯ ₹58,664 ಕೋಟಿ ಎಂದು ಹೇಳಲಾಗಿದ್ದು, ಅಡಿಕೆ ಕೃಷಿಯನ್ನು ಅವಲಂಬಿಸಿರುವವರ ಸಂಖ್ಯೆ ಸುಮಾರು 60 ಲಕ್ಷ ಎಂದು ಅಂದಾಜಿಸಲಾಗಿದೆ.ಈ ಅಂಶಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಸಾರ್ವಜನಿಕ ಆರೋಗ್ಯದ ಜತೆಗೆ ಅಡಿಕೆ ಬೆಳೆಗಾರರ ಹಿತ ಮತ್ತು ಕೃಷಿಯ ಭದ್ರತೆಯನ್ನೂ ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.– ಆರ್.ಸಿ. ನಾರಾಯಣ್ ರೆಂಜ, ಅಡಿಕೆ ಬೆಳೆಗಾರರು, ಪುತ್ತೂರು










