ಬೆಂಗಳೂರು : ಅಭ್ಯರ್ಥಿಗಳ ಒತ್ತಾಯದ ಮೇರೆಗೆ ಮುಂದೂಡಲಾಗಿದ್ದ ಪೊಲೀಸ್ ಸಬ್ ಇನ್ಸ್‌ ಪೆಕ್ಟರ್(ಪಿಎಸ್‍ಐ) ಪರೀಕ್ಷೆಯನ್ನು ಅ.3ರಂದು ನಡೆಸುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ. ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಪ್ರಕಟನೆ ಹೊರಡಿಸಿದ್ದು, ಸೆ.22ರಂದು ನಡೆಸಲು ಈ ಹಿಂದೆ ತೀರ್ಮಾನಿಸಲಾಗಿತ್ತು.

ಆ ದಿನಾಂಕದಂದೇ ಯುಪಿಎಸ್ಸಿ ಮುಖ್ಯ ಪರೀಕ್ಷೆ ಇದ್ದ ಕಾರಣ, ಅಭ್ಯರ್ಥಿಗಳು ಪರೀಕ್ಷೆಯನ್ನು ಮುಂದೂಡುವಂತೆ ಒತ್ತಾಯಿಸಿದ್ದರು. ಹೀಗಾಗಿ ಪರೀಕ್ಷೆಯನ್ನು ಮುಂದೂಡಲಾಗಿತ್ತು ಎಂದಿದ್ದಾರೆ.

ಸರಕಾರ ಇತ್ತೀಚೆಗೆ ಬಿ ಮತ್ತು ಸಿ ವರ್ಗದ ಹುದ್ದೆಗಳ ನೇಮಕ ಸಂದರ್ಭದಲ್ಲಿ ಅರ್ಜಿ ಸಲ್ಲಿಸಲು ಗರಿಷ್ಠ ಮೂರು ವರ್ಷ ವಯೋಮಿತಿ ಸಡಿಲ ಮಾಡಿರುವ ಕಾರಣ ಗ್ರಾಮ ಆಡಳಿತಾಧಿಕಾರಿ ಮತ್ತು ಜಿಟಿಟಿಸಿಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸೆ.19ರಿಂದ ಮತ್ತೊಮ್ಮೆ ಅವಕಾಶ ನೀಡಲಾಗಿದೆ ಎಂದು ವಿವರಿಸಿದ್ದಾರೆ.

ವಯೋಮಿತಿ ಸಡಿಲಿಕೆಯ ಲಾಭ ಪಡೆಯುವವರು ಸೇರಿ ಇತರ ಅರ್ಹರು ಸೆ.28ರವರೆಗೆ ಅರ್ಜಿ ಸಲ್ಲಿಸಬಹುದು. ಶುಲ್ಕ ಪಾವತಿಗೆ ಸೆ.29 ಕೊನೆ ದಿನ. ಈ ಹಿಂದೆ ಅರ್ಜಿ ಸಲ್ಲಿಸಿದವರು ಪುನಃ ಅರ್ಜಿ ಸಲ್ಲಿಸುವ ಅಗತ್ಯ ಇಲ್ಲ ಎಂದು ಅವರು ವಿವರಿಸಿದರು.

ಆದರೆ ಈ ಹುದ್ದೆಗಳಿಗೆ ಈ ಹಿಂದೆ ನಿಗದಿಪಡಿಸಿದ್ದ ದಿನಾಂಕಗಳಂದೇ ಪರೀಕ್ಷೆ ನಡೆಯಲಿದೆ. ಹೊಸದಾಗಿ ಅರ್ಜಿ ಸಲ್ಲಿಸಿದವರಿಗೆ ಕಡ್ಡಾಯ ಕನ್ನಡ ಪರೀಕ್ಷೆ ಯನ್ನು ಅ.26 ರಂದು ನಡೆಸಲಾಗುತ್ತದೆ. ಅದರ ನಂತರ ಎಲ್ಲರಿಗೂ ಅ.27ರಂದು ಪತ್ರಿಕೆ- 1 ಮತ್ತು 2ರ ಪರೀಕ್ಷೆ ನಡೆಯಲಿದೆ ಎಂದರು.

ಕೆ-ಸೆಟ್ ಮತ್ತು ರಾಯಚೂರು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನ.24ರಂದು ಪ್ರತ್ಯೇಕ ಪರೀಕ್ಷೆಗಳನ್ನು ಮಾಡಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!