ಪುತ್ತೂರು :ದರ್ಬೆಯ ಸೇವಾ ಕೇಂದ್ರವೊಂದರಲ್ಲಿ ದಾಖಲೆ ಪತ್ರ ಸುಟ್ಟ ಘಟನೆಗೆ ಸಂಬಂಧಿಸಿ ಎರಡು ಕಡೆಯವರ ಮಧ್ಯೆ ಪರಸ್ಪರ ಹಲ್ಲೆ ನಡೆದಿದ್ದು, ಘಟನೆಗೆ ಸಂಬಂಧಿಸಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರಿನ ಜತೆಗೆ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ದೂರನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ದರ್ಬೆಯಲ್ಲಿರುವ ಅಂಜನಾ ಪೈ ಅವರ ಸೇವಾ ಕೇಂದ್ರಕ್ಕೆ ಮಂಡೆಕೋಲು ನಿವಾಸಿಗಳಾದ ಮುಬಾಶಿರ ಮತ್ತು ಫಾತೀಮಾ ಅವರು ಕೆಲವು ದಾಖಲೆಗಳ ಜೆರಾಕ್ಸ್ ಹಾಗೂ ಲ್ಯಾಮಿನೇಷನ್‌ಗಾಗಿ ಆಗಮಿಸಿದ್ದು, ಈ ವೇಳೆ ತಾಂತ್ರಿಕ ದೋಷದ ಪರಿಣಾಮ ದಾಖಲೆಯೊಂದು ಸುಟ್ಟು ಹೋಗಿದೆ. ಈ ವೇಳೆ ಮಂಡೆಕೋಲಿನ ನಿವಾಸಿಗಳು ಹಾಗೂ ಅಂಗಡಿಯ ಮಾಲಕಿ, ಆಕೆಯ ಪುತ್ರ ಸುದರ್ಶನ್ ಪೈ ಅವರ ಮಧ್ಯೆ ವಾಗ್ವಾದದ ಜತೆಗೆ ಪರಸ್ಪರ ಹಲ್ಲೆ ನಡೆದಿದೆ ಎನ್ನಲಾಗಿದೆ.ಜನ ಸೇರಿದಾಗ ಪುತ್ತೂರು ನಗರ ಪೊಲೀಸರು ಸ್ಥಳಕ್ಕೆ ತೆರಳಿ, ಠಾಣೆಗೆ ಬಂದು ದೂರು ನೀಡುವಂತೆ ತಿಳಿಸಿದರು. ವಿಚಾರಣೆಗಾಗಿ ಸುದರ್ಶನ್ ಪೈ ಅವರನ್ನು ಠಾಣೆಗೆ ಕರೆತರುವ ವೇಳೆ ಅಲ್ಲಿ ಸೇರಿದ್ದ ಕೆಲವರು ತಡೆಯೊಡ್ಡಿದ್ದಾರೆ. ಹೀಗಾಗಿ ಇತ್ತಂಡಗಳ ದೂರು-ಪ್ರತಿದೂರಿನ ಜತೆಗೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ದೂರನ್ನೂ ದಾಖಲಿಸಿಕೊಳ್ಳಲಾಗಿದೆ. ಕೃತ್ಯ ನಡೆದ ಅಂಗಡಿಯಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು, ಅದನ್ನು ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.











