ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ 2026ರ ಜ.14ರಂದು ಮುಂಜಾನೆ ಧನುಪೂಜೆಗೆ ತೆರಳುವ ವೇಳೆ ಸಂಭೋಳ್ಯ ನಿವಾಸಿ ಸುಮಂತ್ (15) ಅವರ ಸಂಶಯಾಸ್ಪದ ಸಾವಿನ ಪ್ರಕರಣ ನಿಗೂಢವಾಗಿಯೇ ಉಳಿದಿರುವ ಹಿನ್ನೆಲೆಯಲ್ಲಿ ಮಂಪರು ಪರೀಕ್ಷೆಯ ಪ್ರಯೋಗ ನಡೆಯುತ್ತಿದೆ.ಸುಮಂತ್ ಅವರ ತಂದೆ ಸುಬ್ರಹ್ಮಣ್ಯ ನಾಯಕ್, ತಾಯಿ ರತ್ನಾವತಿ, ಸಹೋದರ ಸುದರ್ಶನ್, ರತ್ನಾವತಿ ಅವರ ತಮ್ಮ ರಾಧಾಕೃಷ್ಣ ಮತ್ತು ರತ್ನಾವತಿ ಅವರ ದೊಡ್ಡಪ್ಪನ ಮಗ ಲಕ್ಷ್ಮೀನಾರಾಯಣ ಅವರ ಮೊದಲ ಹಂತದ ಪ್ರಶ್ನೋತ್ತರ ಬೆಂಗಳೂರಿನ ಮಡಿವಾಳದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ನಡೆದಿದೆ.ಪ್ರಥಮ ಹಂತದಲ್ಲಿ ಕೇಳಲಾಗಿರುವ ಪ್ರಶ್ನೆ ಮತ್ತು ಉತ್ತರವನ್ನು ಇನ್ನೊಮ್ಮೆ ತಾಳೆ ಹಾಕುವ ಪ್ರಕ್ರಿಯೆ ಆಗಲಿದೆ. ಆ ನಂತರ ಬ್ರೈನ್ ಮ್ಯಾಪಿಂಗ್ ನಡೆಯಲಿದೆ. ಪ್ರಕರಣದ ತನಿಖಾಧಿಕಾರಿಯಾಗಿರುವ ವೃತ್ತ ನಿರೀಕ್ಷಕ ರವಿ ಬಿ.ಎಸ್. ಅವರ ತಂಡ ಪ್ರಶ್ನೆಗಳನ್ನು ಸಿದ್ಧಪಡಿಸಿ ಸುಮಂತ್ ಅವರ ಮನೆಯವರು ಸೇರಿದಂತೆ ಐವರ ಮಂಪರು ಪರೀಕ್ಷೆ ನಡೆಸಿದ ಬಳಿಕ ಶಂಕಿತರ ಬ್ರೈನ್ ಮ್ಯಾಪಿಂಗ್ ನಡೆಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ.











