ಪುತ್ತೂರು: ನಗರಸಭೆ ವ್ಯಾಪ್ತಿಯಲ್ಲಿ ಪಾದಚಾರಿ ರಸ್ತೆಯಲ್ಲಿ ಅನಧಿಕೃತವಾಗಿ ವಸ್ತುಗಳನ್ನು ಇರಿಸಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟುಮಾಡುವ ಉದ್ಯಮದಾರರು ಹಾಗೂ ವ್ಯಾಪಾರಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪುತ್ತೂರು ನಗರಸಭೆ ಎಚ್ಚರಿಕೆ ನೀಡಿದೆ.ವ್ಯಾಪಾರ ವಹಿವಾಟಿಗೆ ಸಂಬಂಧಿಸಿದ ಸಾಮಗ್ರಿಗಳನ್ನು ಪಾದಚಾರಿ ರಸ್ತೆಯಲ್ಲಿ ಇರಿಸಿರುವ ಕುರಿತು ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಸಂಬಂಧಪಟ್ಟವರಿಗೆ ಮೌಖಿಕವಾಗಿ ಸೂಚನೆ ನೀಡಿ ಎಚ್ಚರಿಸಿದ್ದರು. ಆದರೆ, ಸೂಚನೆ ನೀಡಿದ ಬಳಿಕವೂ ಇದೇ ರೀತಿಯ ಘಟನೆಗಳು ಪುನರಾವರ್ತನೆಯಾಗುತ್ತಿರುವುದು ಗಮನಕ್ಕೆ ಬಂದಿದೆ ಎಂದು ನಗರಸಭೆ ತಿಳಿಸಿದೆ.ಅಲ್ಲದೆ, ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದಂತೆ ಹಲವು ಬಾರಿ ಸೂಚನೆ ನೀಡಿದ್ದರೂ ಕೆಲವು ಉದ್ಯಮದಾರರು ಹಾಗೂ ಸಾರ್ವಜನಿಕರು ಅವುಗಳನ್ನು ಬಳಸುತ್ತಿರುವುದು ಕಂಡುಬಂದಿದೆ.ಇನ್ನು ಮುಂದೆ ಉದ್ಯಮ ಸ್ಥಳದ ಮುಂಭಾಗದ ಪಾದಚಾರಿ ರಸ್ತೆಯಲ್ಲಿ ಅನಧಿಕೃತವಾಗಿ ಯಾವುದೇ ವಸ್ತುಗಳನ್ನು ಇರಿಸಿದರೆ, ಯಾವುದೇ ಮುನ್ಸೂಚನೆ ನೀಡದೆ ದಂಡ ವಿಧಿಸುವುದರ ಜತೆಗೆ ವಸ್ತುಗಳನ್ನು ನಗರಸಭೆ ವತಿಯಿಂದ ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಅಗತ್ಯವಿದ್ದಲ್ಲಿ ಸಂಬಂಧಪಟ್ಟ ಉದ್ಯಮದ ಪರವಾನಿಗೆಯನ್ನು ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಸೂಚಿಸಿದೆ.











