ಪುತ್ತೂರು: ನಗರದ ದರ್ಬೆ ಜಂಕ್ಷನ್ ಬಳಿಯ ಡ್ರೀಮ್ ಡೆಸ್ಟಿನೇಶನ್ ಜನಸೇವಾ ಕೇಂದ್ರದಲ್ಲಿ ದಾಖಲಾತಿ ಹಾಳಾದ ವಿಚಾರಕ್ಕೆ ಸಂಬಂಧಿಸಿ ಎರಡು ಕಡೆಯವರ ನಡುವೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಪುತ್ತೂರು ನಗರ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಪ್ರಕರಣವೊಂದರಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಸೆ.2ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.ಸುಳ್ಯ ಜಾಲ್ಸೂರು ನಿವಾಸಿ ಫಾತಿಮತ್ ಮಿಸ್ವಾನ (32) ನೀಡಿದ ದೂರಿನಂತೆ, ಅವರು ಸಹೋದರ ಹಾಗೂ ತಂಗಿಯೊಂದಿಗೆ ಆ.21ರಂದು ಪುತ್ತೂರಿಗೆ ಬಂದಿದ್ದು, ಕೆಲವು ದಾಖಲಾತಿಗಳನ್ನು ಪ್ರಿಂಟ್ ಹಾಗೂ ಲ್ಯಾಮಿನೇಷನ್‌ಗಾಗಿ ದರ್ಬೆಯ ಡ್ರೀಮ್ ಡೆಸ್ಟಿನೇಶನ್ ಜನಸೇವಾ ಕೇಂದ್ರಕ್ಕೆ ನೀಡಿದ್ದರು. ಬಳಿಕ ದಾಖಲಾತಿಗಳ ಪೈಕಿ ಒಂದು ಹಾಳಾಗಿರುವುದನ್ನು ಗಮನಿಸಿ, ಅದನ್ನು ಸರಿಪಡಿಸಬೇಕು ಅಥವಾ ಹೊಸ ದಾಖಲಾತಿ ಪಡೆಯಲು ₹300 ನೀಡಬೇಕು ಎಂದು ಕೇಳಿದಾಗ, ಕೇಂದ್ರದಲ್ಲಿದ್ದ ಅಂಜನಾ ಪೈ ಹಾಗೂ ಸುದರ್ಶನ ಪೈ ಅವರು ಅವಾಚ್ಯವಾಗಿ ನಿಂದಿಸಿದ್ದು, ಸುದರ್ಶನ ಪೈ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.ಘಟನೆಯಲ್ಲಿ ಗಾಯಗೊಂಡವರು ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಈ ದೂರಿನ ಆಧಾರದಲ್ಲಿ ಪುತ್ತೂರು ನಗರ ಠಾಣೆಯಲ್ಲಿ ಅ.ಕ್ರ.97/2026ರಂತೆ BNS ಕಲಂ 352, 115(2), 109 ಹಾಗೂ 3(5)ರಡಿ ಪ್ರಕರಣ ದಾಖಲಾಗಿದೆ. ಆರೋಪಿ ಸುದರ್ಶನ ಪೈ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸೆ.2ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.ಇದಕ್ಕೆ ಪ್ರತಿಯಾಗಿ ಜನಸೇವಾ ಕೇಂದ್ರದ ಮಾಲಕಿ ಅಂಜನಾ ಎಸ್. ಪೈ (50) ನೀಡಿದ ದೂರಿನಂತೆ, ಲ್ಯಾಮಿನೇಷನ್ ವೇಳೆ ತಾಂತ್ರಿಕ ದೋಷದಿಂದ ದಾಖಲಾತಿಯೊಂದು ಹಾಳಾಗಿದ್ದು, ಈ ವಿಚಾರದಲ್ಲಿ ಇಬ್ಬರು ಮಹಿಳೆಯರು ಹಾಗೂ ಓರ್ವ ಪುರುಷ ಗಲಾಟೆ ನಡೆಸಿ ದಾಖಲಾತಿ ನೀಡಬೇಕು ಅಥವಾ ₹10,000 ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಸಮಾಧಾನಪಡಿಸಲು ಯತ್ನಿಸಿದ ವೇಳೆ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಲಾಗಿದೆ ಹಾಗೂ ಜೀವ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.ಈ ದೂರಿನ ಆಧಾರದಲ್ಲಿ ಫಾತಿಮತ್ ಮಿಸ್ವಾನ, ಮುಬಾಶಿರಾ, ಮುಬಾರಿಶ್ ಹಾಗೂ ನೌಶಾದ್ ವಿರುದ್ಧ ಅ.ಕ್ರ.98/2026ರಂತೆ BNS ಕಲಂ 115(2), 352, 351(2), 79 ಹಾಗೂ 3(5)ರಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.ಇದೇ ವೇಳೆ ದರ್ಬೆ ಜಂಕ್ಷನ್ ಬಳಿ ಗಲಾಟೆ ನಡೆಯುತ್ತಿರುವ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ್ದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿಯೂ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಜನರನ್ನು ಚದುರಿಸುವ ಸಂದರ್ಭದಲ್ಲಿ ಕೆಲವರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು, ಗಲಾಟೆಗೆ ಸಂಬಂಧಿಸಿ ಕೆಲವರನ್ನು ಠಾಣೆಗೆ ಕರೆದೊಯ್ಯುವ ವೇಳೆ ನಿಯಾಝ್, ನೌಶಾದ್ ಹಾಗೂ ಇತರರು ತಡೆಯೊಡ್ಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಸಂಬಂಧ ಅ.ಕ್ರ.99/2026ರಂತೆ BNS ಕಲಂ 132, 121(1) ಹಾಗೂ 3(5)ರಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!