ಪುತ್ತೂರುಪುತ್ತೂರು:ಕಾಡುಪ್ರಾಣಿಗಳಿಂದ ಕೃಷಿ ಹಾಗೂ ಜೀವ ರಕ್ಷಿಸಿಕೊಳ್ಳಲು ರೈತರು ಹೊಂದಿರುವ ಕೋವಿ (ಬಂದೂಕು) ಪರವಾನಗಿ ನವೀಕರಣದಲ್ಲಿ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ಕಿರುಕುಳ ನೀಡಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಆರೋಪಿಸಿದ್ದಾರೆ.ಕೋವಿ ಪರವಾನಗಿ ನವೀಕರಣದ ವಿಳಂಬ ಕುರಿತು ವಿಧಾನ ಪರಿಷತ್ತಿನಲ್ಲಿ ತಾವು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಗೃಹ ಸಚಿವರು, ‘ಪರವಾನಗಿ ನವೀಕರಣ ಪ್ರಕ್ರಿಯೆಯನ್ನು ಸರಳೀಕರಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ’ ಎಂದು ಉತ್ತರಿಸಿರುವುದು ಸರ್ಕಾರದ ರೈತ ವಿರೋಧಿ ಧೋರಣೆಯನ್ನು ತೋರಿಸುತ್ತದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕಾನೂನಿನ ಪ್ರಕಾರ ಜಿಲ್ಲಾಧಿಕಾರಿಗಳಿಗೆ ಕೋವಿ ಪರವಾನಗಿಯನ್ನು ಗರಿಷ್ಠ ಐದು ವರ್ಷಗಳವರೆಗೆ ನವೀಕರಿಸುವ ಅವಕಾಶವಿದ್ದರೂ, ಅಧಿಕಾರಿಗಳು ಐದು ವರ್ಷಕ್ಕೆ ನವೀಕರಿಸಬಹುದಾದ ಪರವಾನಗಿಯನ್ನು ಕೇವಲ ಎರಡು ವರ್ಷಕ್ಕೆ ಸೀಮಿತಗೊಳಿಸುತ್ತಿದ್ದಾರೆ. ಇದರಿಂದ ರೈತರು ಕೃಷಿ ಕೆಲಸ ಬಿಟ್ಟು ಪದೇಪದೇ ಸರ್ಕಾರಿ ಕಚೇರಿ ಹಾಗೂ ಪೊಲೀಸ್ ಠಾಣೆಗಳಿಗೆ ಅಲೆಯುವಂತಾಗಿದೆ ಎಂದು ಅವರು ದೂರಿದ್ದಾರೆ.ಕರಾವಳಿ ಹಾಗೂ ಮಲೆನಾಡು ಭಾಗದ ರೈತರು ಅಡಿಕೆ ಎಲೆಚುಕ್ಕೆ ರೋಗ, ಹಳದಿ ರೋಗ, ಅಕಾಲಿಕ ಮಳೆ ಸೇರಿದಂತೆ ಹಲವು ಸಮಸ್ಯೆಗಳಿಂದ ತತ್ತರಿಸಿದ್ದಾರೆ. ಇದರ ನಡುವೆ ಆನೆ ಸೇರಿದಂತೆ ಕಾಡುಪ್ರಾಣಿಗಳ ದಾಳಿಯಿಂದಾಗಿ ರೈತರು ಜೀವಭಯದಲ್ಲಿ ಬದುಕುವಂತಾಗಿದೆ. ಕೆಲವರು ಕೃಷಿ ಜಮೀನು ಹಾಗೂ ತೋಟಗಳನ್ನು ತೊರೆದು ಗುಳೆ ಹೋಗುವ ಪರಿಸ್ಥಿತಿಯೂ ನಿರ್ಮಾಣವಾಗಿದೆ ಎಂದು ಅವರು ಹೇಳಿದ್ದಾರೆ.ಕಾಡುಪ್ರಾಣಿಗಳ ದಾಳಿಗೆ ಪರಿಹಾರ ಪಡೆದಿರುವ ದಾಖಲೆ ಇದ್ದರೆ ಮಾತ್ರ ಕೋವಿ ಪರವಾನಗಿ ನವೀಕರಿಸುವ ಕ್ರಮವೂ ರೈತ ವಿರೋಧಿಯಾಗಿದೆ. ಕಾಡುಪ್ರಾಣಿಗಳು ಯಾವಾಗ, ಎಲ್ಲಿ ದಾಳಿ ಮಾಡುತ್ತವೆ ಎಂಬುದನ್ನು ಮೊದಲೇ ಊಹಿಸಲು ಸಾಧ್ಯವಿಲ್ಲ. ಹೀಗಿರುವಾಗ ಪರಿಹಾರದ ದಾಖಲೆ ಕೇಳುವುದು ಅವೈಜ್ಞಾನಿಕ ಕ್ರಮ ಎಂದು ಕಿಶೋರ್ ಕುಮಾರ್ ಟೀಕಿಸಿದ್ದಾರೆ.ರೈತರ ಸಮಸ್ಯೆಗಳನ್ನು ಅರಿಯಲು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳು ಕಾಡಂಚಿನ ಗ್ರಾಮಗಳಲ್ಲಿ ವಾಸ್ತವ್ಯ ಹೂಡಿ ಪರಿಸ್ಥಿತಿಯನ್ನು ಪರಿಶೀಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.‘ರೈತರ ಜೀವದ ಜತೆ ಚೆಲ್ಲಾಟವಾಡುತ್ತಿರುವ ಸರ್ಕಾರಕ್ಕೆ ಬಿಸಿ ಮುಟ್ಟಿಸುವವರೆಗೆ ಹೋರಾಟ ನಿಲ್ಲುವುದಿಲ್ಲ. ಕೋವಿ ಪರವಾನಗಿ ನವೀಕರಣ ಪ್ರಕ್ರಿಯೆಯನ್ನು ತಕ್ಷಣ ಸರಳೀಕರಿಸಬೇಕು. ಇಲ್ಲವಾದರೆ ಜಿಲ್ಲೆಯ ಶಾಸಕರು, ಸಂಸದರು, ಕಿಸಾನ್ ಸಂಘ, ಬಂದೂಕು ಪರವಾನಗಿದಾರರ ಒಕ್ಕೂಟ ಹಾಗೂ ಸಾವಿರಾರು ರೈತರೊಂದಿಗೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.ರೈತರು ರಚಿಸಿಕೊಂಡಿರುವ ಹೋರಾಟ ಸಮಿತಿಗಳಿಗೆ ಸಂಪೂರ್ಣ ಸಹಕಾರ ಮತ್ತು ಬೆಂಬಲ ನೀಡಲಾಗುವುದು. ಸರ್ಕಾರ ಕೂಡಲೇ ಅವೈಜ್ಞಾನಿಕ ನಿಯಮಗಳನ್ನು ಕೈಬಿಟ್ಟು ಕೋವಿ ಪರವಾನಗಿ ನವೀಕರಣ ಪ್ರಕ್ರಿಯೆಯನ್ನು ಸರಳೀಕರಿಸಬೇಕು ಎಂದು ಕಿಶೋರ್ ಕುಮಾರ್ ಒತ್ತಾಯಿಸಿದ್ದಾರೆ.











