ಪುತ್ತೂರು ( ಅಕ್ಟೋಬರ್ 04) : ಪುತ್ತೂರಿನ ಕೆದಿಲ, ಪಾಟ್ರಕೋಡಿ, ಮಿತ್ತೂರು ಮತ್ತು ಗಡಿಯಾರದಲ್ಲಿ ಲೈನ್‌ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಕೆಮ್ಮಾಯಿ ನಿವಾಸಿ, ಲೈನ್‌ಮ್ಯಾನ್ ರವಿ ಗೌಡ ಅವರು ನಿನ್ನೆ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ವಿದ್ಯುತ್‌ ಸ್ಪರ್ಶಗೊಂಡು ದಾರುಣವಾಗಿ ಸಾವನ್ನಪ್ಪಿರುವ ಘಟನೆಗೆ ಎಸ್‌ಡಿಪಿಐ ಕಬಕ ಬ್ಲಾಕ್ ಉಪಾಧ್ಯಕ್ಷರಾದ ಕರೀಂ ಬೀಟಿಗೆ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ತಮ್ಮ ಕರ್ತವ್ಯದ ಹಾದಿಯಲ್ಲಿ ಹಗಲಿರುಳು ಶ್ರಮಿಸುತ್ತಿದ್ದ ಕಷ್ಟಜೀವಿ ಕಾರ್ಮಿಕನೊಬ್ಬ ಇಲಾಖೆಯ ಹಾಗೂ ಸಂಬಂಧಪಟ್ಟವರ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯದಿಂದಾಗಿ ಪ್ರಾಣ ಕಳೆದುಕೊಂಡಿರುವುದು ಅತ್ಯಂತ ಖೇದಕರ ಎಂದು ಅವರು ತಿಳಿಸಿದ್ದಾರೆ.

ಮೃತ ರವಿ ಗೌಡ ಅವರ ಅಕಾಲಿಕ ಅಗಲಿಕೆಯಿಂದ ದುಃಖದಲ್ಲಿರುವ ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಕರೀಂ ಬೀಟಿಗೆ ಅವರು ಹೇಳಿದ್ದಾರೆ.

ಕೇವಲ ಇಲಾಖೆಯ ಅಥವಾ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಈ ಅನಾಹುತ ಸಂಭವಿಸಿದೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಆದ್ದರಿಂದ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಯು ಈ ಕೆಳಗಿನ ಬೇಡಿಕೆಗಳನ್ನು ತಕ್ಷಣವೇ ಈಡೇರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ:
1- ಮೃತ ಲೈನ್‌ಮ್ಯಾನ್ ರವಿ ಗೌಡ ಅವರ ಕುಟುಂಬದ ಸಂತ್ರಸ್ತೆಗೆ ಹಾಗೂ ಭವಿಷ್ಯದ ದೃಷ್ಟಿಯಿಂದ ಸರ್ಕಾರವು ತಕ್ಷಣವೇ ₹50 ಲಕ್ಷಗಳ ಪರಿಹಾರವನ್ನು ಘೋಷಿಸಬೇಕು.
2-ಮೃತರ ಕುಟುಂಬದ ಅರ್ಹ ಸದಸ್ಯರೊಬ್ಬರಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ಉದ್ಯೋಗವನ್ನು ಕಲ್ಪಿಸಬೇಕು.
3- ಕಾರ್ಮಿಕರ ಸುರಕ್ಷತೆಯನ್ನು ಗಣನೆಗೆ ತೆಗೆದುಕೊಳ್ಳದೆ, ಈ ದುರ್ಘಟನೆಗೆ ನೇರ ಅಥವಾ ಪರೋಕ್ಷ ಕಾರಣರಾದ ನಿರ್ಲಕ್ಷ್ಯ ತೋರಿದ ಅಧಿಕಾರಿಗಳು ಮತ್ತು ಸಂಬಂಧಪಟ್ಟವರ ವಿರುದ್ಧ ತಕ್ಷಣವೇ ಸೂಕ್ತ ಕಾನೂನು ಕ್ರಮ ಜರುಗಿಸಬೇಕು.

ಮುಂದಿನ ದಿನಗಳಲ್ಲಿ ಇಂತಹ ದುರ್ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ಒಂದು ವೇಳೆ ಸಂತ್ರಸ್ಥ ಕುಟುಂಬಕ್ಕೆ ನ್ಯಾಯ ಸಿಗದಿದ್ದರೆ, ನ್ಯಾಯಕ್ಕಾಗಿ ಪ್ರಜಾಸತ್ತಾತ್ಮಕ ಹಾಗೂ ಕಾನೂನುಬದ್ಧ ಹೋರಾಟವನ್ನು ಮುಂದುವರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!