
ತ್ರಿಶೂರ್: ಕೇರಳದ ತ್ರಿಶೂರ್‌ನಲ್ಲಿ ಶುಕ್ರವಾರ ಎಟಿಎಂ ದರೋಡೆಯಲ್ಲಿ ಭಾಗಿಯಾಗಿದ್ದ ಶಂಕಿತ ಏಳು ಜನರ ಗ್ಯಾಂಗ್ ನ್ನು ಗುರಿಯಾಗಿಸಿ ನಾಮಕ್ಕಲ್ ಪೊಲೀಸರು ನಡೆಸಿದ ಗುಂಡಿನ ದಾಳಿಗೆ ಓರ್ವ ಬಲಿಯಾಗಿದ್ದಾನೆ. ಇತರ ಆರು ಮಂದಿಯನ್ನು ಬಂಧಿಸಲಾಗಿದೆ.
ದರೋಡೆಕೋರರ ಗ್ಯಾಂಗ್ ತ್ರಿಶೂರ್ ಜಿಲ್ಲೆಯಲ್ಲಿ ಎಟಿಎಂ ದರೋಡೆ ಮಾಡಿ, ನಗದು ಮತ್ತು ಆಯುಧಗಳೊಂದಿಗೆ ಕಂಟೈನರ್ ಲಾರಿಯೊಂದರಲ್ಲಿ ಪರಾರಿಯಾಗುತಿತ್ತು.
ಈ ಖದೀಮರ ತಂಡವನ್ನು ಬೆನ್ನಟ್ಟಿದ್ದ ಪೊಲೀಸರು, ವಾಹನ ನಿಲ್ಲಿಸುವಂತೆ ಹೇಳಿದರೂ ಅದನ್ನು ನಿರಾಕರಿಸಿ ವೇಗವಾಗಿ ಹೋಗುತ್ತಿದ್ದಾಗ ಗುಂಡು ಹಾರಿಸಿದ್ದಾರೆ.
ಎನ್ ಕೌಂಟರ್ ನಲ್ಲಿ ಓರ್ವ ಕಳ್ಳ ಸಾವನ್ನಪ್ಪಿದ್ದಾನೆ. ದರೋಡೆಗೆ ಬಳಸಿದ್ದ ಕಾರನ್ನು ಕಂಟೈನರ್ ಟ್ರಕ್‌ನೊಂದಿಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಮಕ್ಕಲ್ ಜಿಲ್ಲೆಯ ಕುಮಾರಪಾಳ್ಯಂನಲ್ಲಿ ಈ ಘಟನೆ ನಡೆದಿದೆ.
ತ್ರಿಶೂರ್ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಎಟಿಎಂ ದರೋಡೆಯಲ್ಲಿ ಅವರ ಪಾತ್ರವನ್ನು ಖಚಿತಪಡಿಸಿಕೊಳ್ಳಲು ತನಿಖೆ ನಡೆಸಲಾಗುತ್ತಿದೆ ಎಂದು ಸೇಲಂ ವಲಯದ ಡಿಐಜಿ ಇ ಎಸ್ ಉಮಾ ತಿಳಿಸಿದ್ದಾರೆ. ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದಾಗ ಓರ್ವ ಕಳ್ಳ ಗಾಯಗೊಂಡಿದ್ದಾನೆ. ಘಟನೆ ವೇಳೆ ಗಾಯಗೊಂಡಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದರು.
ದರೋಡೆಕೋರರು ಹರಿಯಾಣದಿಂದ ಬಂದವರಾಗಿದ್ದಾರೆ. ನಾಮಕ್ಕಲ್ ಜಿಲ್ಲೆಯಲ್ಲಿ ಇತ್ತೀಚಿಗೆ ನಡೆದ ಇದೇ ರೀತಿಯ ದರೋಡೆಯಲ್ಲಿ ಹರಿಯಾಣದ ಇಬ್ಬರನ್ನು ಪೊಲೀಸರು ಬಂಧಿಸಿದ್ದರು ಎಂದು ಡಿಐಜಿ ತಿಳಿಸಿದರು.
