
ಬ್ರಹ್ಮಾವರ, ಅ.6: ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ತಂದೆಯ ಅಸ್ವಾಭಾವಿಕ ಮರಣ ಪ್ರಕರಣವನ್ನು ಪೊಲೀಸ್ ಠಾಣೆಗೆ ತಿಳಿಸದೆ ಮರೆಮಾಚಿ ಮೃತದೇಹ ಅಂತ್ಯಸಂಸ್ಕಾರ ಮಾಡಿದ ಘಟನೆಗೆ ಸಂಬಂಧಿಸಿ ಮೃತರ ಪುತ್ರನ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಹ್ಮಾವರ ತಾಲೂಕಿನ 34ನೇ ಕುದಿ ಗ್ರಾಮದ ಬಿಯಾಳಿ ಹೊಸಗುಮ್ಮ ನಿವಾಸಿ ಸುಬ್ರಾಯ ನಾಯ್ಕ (66) ಎಂಬವರು ಮಾನಸಿಕ ಖಾಯಿಲೆಯಿಂದ ಸೆ.27ರಂದು ಅವರ ಗದ್ದೆಯ ಹತ್ತಿರ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದರು. ಅವರ ಹಿರಿಯ ಮಗನಾದ ಆರೋಪಿ ಸೀತಾರಾಮ ನಾಯ್ಕ (39) ಎಂಬಾತ ತನ್ನ ತಂದೆಯು ಸ್ವಾಭಾವಿಕವಾಗಿ ಮರಣ ಹೊಂದದೆ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ತಿಳಿದೂ ಕೂಡಾ ಈ ಬಗ್ಗೆ ಪೊಲೀಸ್ ಠಾಣೆಗೆ ಮತ್ತು ಸಂಬಂಧಪಟ್ಟ ಇಲಾಖೆಗೆ ಕಾನೂನಾತ್ಮಕವಾಗಿ ಮಾಹಿತಿ ನೀಡದೇ ಅಂದು ಸಂಜೆ 6 ಗಂಟೆಗೆ ತಂದೆ ಮೃತದೇಹವನ್ನು ದಹನ ಮಾಡಿದ್ದರು.
ಈ ಬಗ್ಗೆ ಮಾಹಿತಿಯಂತೆ ಅ.3ರಂದು ಪೊಲೀಸರು ಸ್ಥಳಕ್ಕೆ ಹೋಗಿ ವಿಚಾರಿಸಿ ನಡೆದ ಕೃತ್ಯವನ್ನು ಖಚಿತಪಡಿಸಿಕೊಂಡಿದ್ದು, ಅದರಂತೆ ಸೀತಾರಾಮ ನಾಯ್ಕ ವಿರುದ್ದ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.






