
ಜೈ ಪುರ: ಕರ್ವಾ ಚೌತ್ ದಿನ ತಡವಾಗಿ ಮನೆಗೆ ಬಂದ ಪತಿ ಜೊತೆ ಜಗಳವಾಡಿದ ಪತ್ನಿ ಬಳಿಕ ಆತ್ಮಹತ್ಯೆಗೆ ಶರಣಾದ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ಅಕ್ಟೋಬರ್ 20 ರಂದು ನಗರದ ಹರ್ಮಾಡಾ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಮೃತ ಮಹಿಳೆಯನ್ನು ಮೋನಿಕಾ (35) ಎಂದು ಗುರುತಿಸಲಾಗಿದೆ.
ಕರ್ವಾ ಚೌತ್‌ನಂದು ಪತಿ ಘನಶ್ಯಾಮ್ ಬಂಕರ್ (38) ತಡವಾಗಿ ಮನೆಗೆ ಬಂದಿದ್ದಾನೆ. ಇದರಿಂದ ಕೋಪಿಸಿಕೊಂಡ ಮೋನಿಕಾ ಜಗಳ ಮಾಡಿದ್ದಾಳೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ವಾದದ ನಂತರ, ಮೋನಿಕಾಳ ಮನವೊಲಿಸಲು ಬಂಕರ್ ಪ್ರಯತ್ನಿಸಿದ್ದಾನೆ. ಆದರೆ ಆಕೆ ಮನೆಯಿಂದ ಹೊರಬಂದು, ವೇಗವಾಗಿ ಬರುತ್ತಿದ್ದ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪತ್ನಿಯ ಸಾವಿನಿಂದ ಮನನೊಂದ ಬಂಕರ್ ಮನೆಗೆ ಮರಳಿದ್ದು, ಆಕೆಯ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತ್ಮಹತ್ಯೆಗೂ ಮುನ್ನ ಬಂಕರ್ ತನ್ನ ಅಣ್ಣನಿಗೆ ವಾಟ್ಸಾಪ್ ಸಂದೇಶವನ್ನು ಕಳುಹಿಸಿದ್ದಾನೆ. ಅದರಲ್ಲಿ ಸಹೋದರ, ನಾನು ಸೋತಿದ್ದೇನೆ, ಕ್ಷಮಿಸಿ. ಗಣಪತ್ ಜಿ ಮತ್ತು ಘನಶ್ಯಾಮ್ ಕಾಂಡೆಲ್ ಅವರೊಂದಿಗೆ ಮಾತನಾಡಿ,
ಅವರು ನಿಮಗೆ ಸಹಾಯ ಮಾಡುತ್ತಾರೆ. ಈಗ ನೀವು ನನ್ನ ಐಡಿಯಲ್ಲಿ ಕೆಲಸ ಮಾಡಬೇಕು.. ನನ್ನ ಪತ್ನಿ ರೈಲಿನ ಮುಂದೆ ಹಾರಿದ್ದಾಳೆ ಎಂದು ತಿಳಿಸಿದ್ದಾನೆ.
ಘಟನೆಯ ಬಗ್ಗೆ ಜೈಪುರ ಪೊಲೀಸ್ ಅಧಿಕಾರಿ ಮಾತನಾಡಿ, ನೆಟ್‌ವರ್ಕ್ ಮಾರ್ಕೆಟಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಘನಶ್ಯಾಮ್ ಅವರು ಕರ್ವಾ ಚೌತ್‌ನಲ್ಲಿ ತಡವಾಗಿ ಮನೆಗೆ ಬಂದಿದ್ದರು, ಇದು ಅವರ ಮತ್ತು ಅವರ ಪತ್ನಿ ನಡುವೆ ಜಗಳಕ್ಕೆ ಕಾರಣವಾಯಿತು, ನಂತರ ಅವರು ಆತ್ಮಹತ್ಯೆ ಮಾಡಿಕೊಂಡರು ಎಂದರು.
ಘಟನೆಯ ಬಳಿಕ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.
