ಪುತ್ತೂರು: ಬಗರ್‌ಹುಕುಂ ಆಪ್‌ನಲ್ಲಿ ತಾಂತ್ರಿಕದೋಷಗಳಿದ್ದು ಈ ಕಾರಣಕ್ಕೆ ನನ್ನ ಕ್ಷೇತ್ರದಲ್ಲಿ ಅಕ್ರಮ ಸಕ್ರಮ ಕಡತ ವಿಲೇವಾರಿ ಮಾಡಿ ಮಂಜೂರು ಮಾಡಿದರೂ ಹಕ್ಕು ಪತ್ರ ನೀಡಲು ಸಾಧ್ಯವಾಗುತ್ತಿಲ್ಲ, ಇದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು ಇದರಿಂದ ನಾವು ಅಕ್ರಮ ಸಕ್ರಮ ಕಡತ ವಿಲೇವಾರಿ ಮಾಡಿದರೂ ಪ್ರಯೋಜನವೇ ಇಲ್ಲದಂತಾಗಿದೆ, ತಾಂತ್ರಿಕ ಸಮಸ್ಯೆಯನ್ನು ತಕ್ಷಣ ಪರಿಹರಿಸಬೇಕು ಎಂದು ಶಾಸಕ ಅಸೋಕ್ ರೈ ಅವರು ಸದನದಲ್ಲಿ ಸರಕಾರದ ಗಮನಸೆಳೆದಿದ್ದಾರೆ.

ಸದನದಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕರು ಬಗರ್ ಹುಕುಂ ಆಪ್ ಅತ್ಯಂತ ಉತ್ತಮ ವ್ಯವಸ್ಥೆ ಎಂದು ಪ್ರಾರಂಭದಲ್ಲಿ ಹೇಳಲಾಗಿತ್ತು, ಈ ಆಪ್ ಉತ್ತಮ ಯೋಜನೆಯೇ ಆದರೂ ಇದರಲ್ಲಿನ ತಾಂತ್ರಿಕ ದೋಷವನ್ನು ನಿವಾರಣೆ ಮಾಡುವಲ್ಲಿ ವಿಳಂಬವಾಗುತ್ತಿದೆ. ಈ ಹಿಂದೆಯೇ ನಾನು ಅನೇಕ ಬಾರಿ ಈ ವಿಚಾರವನ್ನು ಕಂದಾಯ ಇಲಾಖಾ ಸಚಿವರು ಮತ್ತು ಅಧಿಕಾರಿಗಳ ಗಮನಕ್ಕೆ ತಂದಿದ್ದೆ ಆದರೆ ಲೋಪಗಳು ಹಾಗೆಯೇ ಮುಂದುವರೆದಿರುವುದು ಕಂಠಕವಾಗಿ ಪರಿಣಮಿಸಿದೆ, ಮಂಜೂರಾದ ಕಡತಗಳನ್ನು ಕೂಡಾ ವಿಲೇವಾರಿ ಮಾಡಲು ಸಾಧ್ಯವಾಗುತ್ತಿಲ್ಲ  ಎಂದು ಸಭೆಯಲ್ಲಿ ವಿವರಿಸಿದರು.

ಆಪ್ ರಿಸೀವ್ ಮಾಡುತ್ತಿಲ್ಲ ಯಾಕೆ?

ಬಗರ್‌ಹುಕುಂ ಆಪ್‌ನಲ್ಲಿ ಸರ್ವೆ ಇಲಾಖೆಗೆ ಸಂಬಂದಿಸಿದ ಅಥವಾ ಜಾಗಕ್ಕೆ ಸಂಬಂಧಿಸಿದ ವಿವರಗಳನ್ನು ಅಪ್‌ಲೋಡು ಮಾಡುವಾಗ ಅದು ರಿಸೀವ್ ಮಾಡುತ್ತಿಲ್ಲ. ಕೆಲವೊಂದು ಸರ್ವೆ ನಂಬರ್‌ಗಳನ್ನು ಹಿಲ್ ಬ್ಲಾಕ್ ಎಂದು ತೋರಿಸಿದರೆ ಮತ್ತೆ ಕೆಲವೊಂದು ಕಡೆ ಕಡತಗಳನ್ನೇ ಎಂಟ್ರಿಗೆ ತೆಗೆದುಕೊಳ್ಳುತ್ತಿಲ್ಲ. ಒಂದೇ ಜಾಗಕ್ಕೆ ಎರಡು ಸರ್ವೆ ನಂಬರ್ ಇದ್ದರೂ ಆಪ್ ಎಂಟ್ರಿಗೆ ತೆಗೆದುಕೊಳ್ಳುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಕೆಲವು ಕಡೆ ನೆಟ್‌ವರ್ಕ್ ಸಮಸ್ಯೆ ಇರುವ ಕಾರಣ ಆಪ್ ಅಪ್‌ಲೋಡು ಮಾಡಲು ಆಗುತ್ತಿಲ್ಲ ಎಂದು ಸದನದ ಗಮನಸೆಳೆದರು.

ಶಾಸಕನಾಗಿ೨೦ ತಿಂಗಳಾಯ್ತು

ನಾನು ಶಾಸಕನಾಗಿ ೨೦ ತಿಂಗಳಾಯ್ತು. ಈ ಅವಧಿಯಲ್ಲಿ ೬೯೬ ಅಕ್ರಮ ಸಕ್ರಮ ಮತ್ತು ೨೫೦೦ ೯೪ ಸಿ ಮತ್ತು ೯೪ ಸಿಸಿ ಕಡತಗಳನ್ನು ವಿಲೇವಾರಿ ಮಾಡಿದ್ದೇವೆ. ಚುನಾವಣಾ ಸಮಯದಲ್ಲಿ ಜನತೆಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಆದರೆ ಅಕ್ರಮ ಸಕ್ರಮ ವಿಲೇವಾರಿಯಾದ ಕಡತಗಳಿಗೆ ಹಕ್ಕು ಪತ್ರ ಕೊಡುವಲ್ಲಿ ನಾವು ಹಿಂದೆ ಇದ್ದೇವೆ ಅದಕ್ಕೆ ತಕ್ಷಣ ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸಬೇಕು ಎಂದು ಸದನದಲ್ಲಿ ಮನವಿ ಮಾಡಿದರು.

ಜಿಲ್ಲಾಧಿಕಾರಿಗಳಿಂದ ಈ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ

ಜಿಲ್ಲಾಧಿಕಾರಿಗಳಿಂದ, ಸರ್ವೆಯರ್‌ಗಳಿಂದ ಅಥವಾ ಇನ್ನಿತರ ಕಂದಾಯ ಅಧಿಕಾರಿಗಳಿಂದ ಈ ಸಮಸ್ಯೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಾಫ್ಟ್‌ವೇರನ್ನು ಡೆವಲಪ್ ಮಡಿದ ಅಧಿಕಾರಿಗಳ ಮೂಲಕವೇ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ ಇದಕ್ಕೆ ಸಚಿವರು ತಕ್ಷಣ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು.

ನಾಳೆಯೇ ಸಮಸ್ಯೆ ಗೆ ಪರಿಹಾರ: ಸಚಿವರ ಭರವಸೆ

ಪುತ್ತೂರು ಶಾಸಕರಾದ ಅಶೋಕ್ ರೈ ಅವರು ಬಗರ್‌ಹುಕುಂ ಆಪ್ ಸಮಸ್ಯೆಯ ಬಗ್ಗೆ ಸದನದ ಗಮನಸೆಳೆದಿದ್ದಾರೆ. ಈ ಸಮಸ್ಯೆಯನ್ನು ಆಲಿಸಲು ಕಂದಾಯ ಸಚಿವರು ಇಂದು ಸಭೆಯಲ್ಲಿ ಇಲ್ಲದ ಕಾರಣ ನಾಳೆ ಅವರ ಮೂಲಕವೇ ಕಮಿಷನರ್‌ರನ್ನು ಕೂರಿಸಿ ಪರಿಹಾರ ಕಂಡುಕೊಳ್ಳುತ್ತೇವೆ. ಕಂದಾಯ ಸಚಿವರು ಅಗತ್ಯ ಕೆಲಸದ ನಿಮಿತ್ತ ಇವತ್ತು ಬಂದಿಲ್ಲ. ಅಶೋಕ್ ರೈ ಅವರ ಆಪ್ ಸಮಸ್ಯೆಯ ಬಗ್ಗೆ ಖಂಢಿತವಾಗಿಯೂ ನಾಳೆಯೇ ಪರಿಹಾರ ಕಂಡುಕೊಳ್ಳುತ್ತೇವೆ ಎಂದು ಕಂದಾಯ ಸಚಿವರ ಪರವಾಗಿ ಸಚಿವ ಚೆಲುವರಾಯ ಸ್ವಾಮಿ ಸದನದಲ್ಲಿ ತಿಳಿಸಿದರು.


ಮಂಡೆಬೆಚ್ಚ ಮಲ್ಪೊಡ್ಚಿ

ಅಶೋಕೆರೇ ಇರೆನ ಆಪ್ ಬೊಕ್ಕ ಸಚಿವರ್ ಇಜ್ಜಂದಿನ ಈ ರಡ್ಡ್ ಸಮಸ್ಯೆ ಎಲ್ಲೆ ಪರಿಹಾರ ಆಪುಂಡು ಮಂಡೆಬೆಚ್ಚ ಮಲ್ಪೊಡ್ಚಿ ಎಂದು ಸಭಾಧ್ಯಕ್ಷರಾದ ಯು ಟಿ ಖಾದರ್ ರವರು ತಮ್ಮ ಮಾತೃಭಾಷೆ ತುಳುವಿನಲ್ಲೇ ಶಾಸಕ ಅಶೋಕ್ ರೈ ಅವರಿಗೆ ತಿಳಿಸಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!