ಮಂಡ್ಯ : ಗ್ರಾಹಕರಿಗೆ ತೂಕದಲ್ಲಿ ವ್ಯತ್ಯಾಸ ಮಾಡುತ್ತಿದ್ದ ಜಿಲ್ಲೆಯ ಪಾಂಡವಪುರ ಪಟ್ಟಣದ ಮೂರು ಆಭರಣ ಮಳಿಗೆಗಳಿಂದ ಎಲೆಕ್ಟ್ರಾನಿಕ್ ತೂಕದ ಯಂತ್ರಗಳನ್ನು ಗುರುವಾರ ವಶಪಡಿಸಿಕೊಂಡ ರಾಜ್ಯ ಆಹಾರ ಆಯೋಗದ ಸದಸ್ಯರ ತಂಡವು ಮಳಿಗೆಗಳಿಗೆ ಬೀಗ ಜಡಿದಿದೆ.
ಮಹಾಲಕ್ಷ್ಮಿ ಬ್ಯಾಂಕರ್ ಅಂಡ್ ಜ್ಯುವೆಲರ್ಸ್, ಮಹೇಂದ್ರ ಜ್ಯುವೆಲರ್ಸ್ ಹಾಗೂ ಲಕ್ಷ್ಮಿ ಜ್ಯುವೆಲರ್ಸ್ ಮಾಲೀಕರಿಗೆ ಕಾನೂನು ಮಾಪನಶಾಸ್ತ್ರ ಅಧಿಕಾರಿಗಳು ಎಚ್ಚರಿಕೆ ನೀಡಿ, ನೋಟಿಸ್ ಜಾರಿ ಮಾಡಿದ್ದಾರೆ.
‘ಈ ಮಳಿಗೆಗಳಲ್ಲಿದ್ದ ತೂಕದ ಯಂತ್ರಗಳಲ್ಲಿ ಒಂದರಿಂದ ಒಂದೂವರೆ ಗ್ರಾಂನಷ್ಟು ವ್ಯತ್ಯಾಸ ಬರುತ್ತಿತ್ತು. ಅಂದರೆ, ಒಂದು ಗ್ರಾಂ ಚಿನ್ನದ ಮಾರುಕಟ್ಟೆ ಮೌಲ್ಯ ಪ್ರಸ್ತುತ ₹7 ಸಾವಿರವಿದ್ದು, ಗ್ರಾಹಕರಿಗೆ ದೊಡ್ಡ ಮಟ್ಟದಲ್ಲಿ ಮೋಸವಾಗುತ್ತಿತ್ತು. ಪರವಾನಗಿ ಪಡೆಯದ ಮತ್ತು ನವೀಕರಣ ಮಾಡಿಸಿಕೊಳ್ಳದ ಕಾರಣಗಳೂ ಸೇರಿದಂತೆ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ನಿಯಮಿತವಾಗಿ ಪರಿಶೀಲಿಸದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ’ ಎಂದು ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ಮಾದ್ಯಮಕ್ಕೆ ತಿಳಿಸಿದರು.