ವರದಕ್ಷಿಣೆ ಕಿರುಕುಳ ಆರೋಪ ಮಾಡಿ ಸೊಸೆ ಸಾವಿಗೆ ಶರಣಾದ ಬೆನ್ನಲ್ಲೇ ಪೊಲೀಸ್ ವಿಚಾರಣೆಗೆ ಹೆದರಿ ವಿಷ ಸೇವಿಸಿದ್ದ ಅತ್ತೆ ಕೂಡ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಈ ಘಟನೆ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ನಡೆದಿದೆ.

ಕೇರಳದ ಪಿರವಂತೂರಿನ ನಿವಾಸಿ ಶ್ರುತಿ (25) ಅ.21ರ ಬೆಳಗ್ಗೆ 7.30ಕ್ಕೆ ಗಂಡನ ಮನೆಯಲ್ಲೇ ನೇಣು ಬಿಗಿದುಕೊಂಡು ಸಾವಿಗೆ ಶರಣಾದಳು.

ಅತ್ತೆಯ ವರದಕ್ಷಿಣೆ ಕಿರುಕುಳವೇ ಸಾವಿಗೆ ಕಾರಣ ಎಂದು ತವರು ಮನೆಗೆ ಮೆಸೇಜ್ ಕಳುಹಿಸಿ ದುಡುಕಿನ ನಿರ್ಧಾರ ತೆಗೆದುಕೊಂಡಳು. ಈ ಪ್ರಕರಣದಲ್ಲಿ ವಿಚಾರಣೆ ಎದುರಿಸಬೇಕಾಗುತ್ತದೆ ಎಂಬ ಭಯದಲ್ಲಿ ಶ್ರುತಿ ಅತ್ತೆ ಚೆಂಬಕವಲ್ಲಿ, ಮೂರ್ನಾಲ್ಕು ದಿನಗಳ ಹಿಂದೆ ವಿಷ ಸೇವನೆ ಮಾಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ನಿನ್ನೆ (ಅ.28) ಮೃತಪಟ್ಟಿದ್ದಾರೆ.

ಕಾರ್ತಿಕ್, ತಮಿಳುನಾಡು ವಿದ್ಯುತ್ ಮಂಡಳಿಯ ಉದ್ಯೋಗಿ. 6 ತಿಂಗಳ ಹಿಂದಷ್ಟೇ ಶ್ರುತಿಯೊಂದಿಗೆ ಮದುವೆಯಾಗಿತ್ತು. ವರದಿಗಳ ಪ್ರಕಾರ, ಕಾರ್ತಿಕ್ ಅವರ ತಾಯಿ, ಶ್ರುತಿ ಜತೆ ವರದಕ್ಷಿಣೆ ವಿಚಾರವಾಗಿ ಆಗಾಗ ಜಗಳವಾಡುತ್ತಿದ್ದರು. ತಾಯಿಯೊಂದಿಗೆ ಶ್ರುತಿ ದೂರವಾಣಿ ಮೂಲಕ ಮಾತನಾಡಿದ್ದ ಆಡಿಯೋ ಕೂಡ ಬಿಡುಗಡೆ ಮಾಡಲಾಗಿತ್ತು.

ಆಡಿಯೋದಲ್ಲಿ ಶ್ರುತಿ, ಅತ್ತೆಯ ಕಿರುಕುಳದ ಬಗ್ಗೆ ಮಾತನಾಡಿದ್ದರು. ನನ್ನ ಗಂಡನ ಜೊತೆ ಕೂರಲು ಬಿಡುತ್ತಿಲ್ಲ. ಒಟ್ಟಿಗೆ ಕುಳಿತು ತಿನ್ನಲು ಒಪ್ಪುತ್ತಿಲ್ಲ. ಬಟ್ಟಲಿನಲ್ಲಿ ತಿನ್ನಲು ಒತ್ತಾಯಿಸುತ್ತಾರೆ. ಕ್ಷಮಿಸಿ, ನನಗೆ ಸಾಯುವುದನ್ನು ಬಿಟ್ಟರೆ ಬೇರೆ ದಾರಿಯಿಲ್ಲ. ಅವರು ನನ್ನ ಆಭರಣಗಳನ್ನು ಸಹ ಕಸಿದುಕೊಂಡಿದ್ದಾರೆ. ಅದನ್ನು ಮರಳಿ ಪಡೆಯಬೇಕು ಎಂದು ಶ್ರುತಿ ಆಡಿಯೋದಲ್ಲಿ ಹೇಳಿದ್ದರು.

ಅಂದಹಾಗೆ ಶ್ರುತಿಯ ತಂದೆ ತಮಿಳುನಾಡು ವಿದ್ಯುತ್ ಮಂಡಳಿಯಲ್ಲಿ ಇಂಜಿನಿಯರ್ ಆಗಿದ್ದಾರೆ. ಹೀಗಾಗಿ ಕುಟುಂಬ ತಮಿಳುನಾಡಿಗೆ ತೆರಳಿತ್ತು. ಕಾರ್ತಿಕ್ ಕುಟುಂಬಕ್ಕೆ ವರದಕ್ಷಿಣೆಯಾಗಿ 10 ಲಕ್ಷ ಮತ್ತು 400 ಗ್ರಾಂ ಚಿನ್ನವನ್ನು ನೀಡಲಾಗಿತ್ತು. ಆದರೂ, ವರದಕ್ಷಿಣೆ ಕಡಿಮೆಯಾಗಿದೆ ಎಂದು ಅತ್ತೆ ನಿರಂತರವಾಗಿ ಶ್ರುತಿಗೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.

ಈ ವಿಷಯವನ್ನು ಶ್ರುತಿ ತನ್ನ ಮನೆಯವರಿಗೆ ತಿಳಿಸಿದ್ದಳು. ಆದರೆ, ಹೊಂದಾಣಿಕೆ ಮಾಡಿಕೊಂಡು ಹೋಗುವಂತೆ ಹೇಳಿದ್ದರು. ಆದರೆ, ಕಿರುಕುಳವನ್ನು ಸಹಿಸಲಾರದ ಶ್ರುತಿ ಕೊನೆಗೆ ಸಾವಿನ ಮನೆ ಪ್ರವೇಶ ಮಾಡಿದ್ದಾರೆ ಇದರ ಬೆನ್ನಲ್ಲೇ ಪೊಲೀಸ್ ವಿಚಾರಣೆಗೆ ಹೆದರಿದ ಅತ್ತೆ ಕೂಡ ವಿಷ ಸೇವಿಸಿ ಮೃತಪಟ್ಟಿದ್ದಾರೆ.

ಇಂಗ್ಲಿಷ್‌ನಲ್ಲಿ ಎಂಎ ಪದವಿ ಪಡೆದಿದ್ದ ಶ್ರುತಿ ಕೊಯಮತ್ತೂರಿನ ಎಸ್‌ಎನ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿದ್ದರು. ಮದುವೆಯ ನಂತರ ಗಂಡನ ಮನೆಯವರ ಒತ್ತಡಕ್ಕೆ ಮಣಿದು ಶೃತಿ ಕೆಲಸಕ್ಕೆ ರಾಜೀನಾಮೆ ನೀಡಬೇಕಾಯಿತು. ಘಟನೆ ಸಂಬಂಧ ಸುಚೀಂದ್ರಂ ಪಟ್ಟಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ

Leave a Reply

Your email address will not be published. Required fields are marked *

Join WhatsApp Group
error: Content is protected !!