ತನ್ನ ಪ್ರೇಮಿ ಜೊತೆ ಪರಾರಿಯಾಗಲು ಯತ್ನಿಸಿದ್ದ ಪತ್ನಿಯನ್ನು ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಯೋಧನೊಬ್ಬ ರೆಡ್‌ಹ್ಯಾಂಡ್ ಆಗಿ ಹಿಡಿದಿರುವ ಆಘಾತಕಾರಿ ಘಟನೆ ಬಿಹಾರದಲ್ಲಿ ನಡೆದಿದೆ. ಪಟನಾ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಕೆಲ ಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.
ಸಿಆರ್‌ಪಿಎಫ್ ಯೋಧ ಪ್ಲಾಟ್‌ಫಾರ್ಮ್ ನಂ.9 ರಲ್ಲಿ ನೆರೆದಿದ್ದ ಎಲ್ಲರೆದುರೇ ಪತ್ನಿಯ ಪ್ರೇಮಿಯನ್ನು ಥಳಿಸಿದ್ದಾರೆ. ಇನ್ನು ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್(Viral Video) ಆಗಿದೆ.
ಏನಿದು ಘಟನೆ?
ಬುಧವಾರ (ಅಕ್ಟೋಬರ್ 30) ಸಂಜೆ ಪಾಟ್ನಾ ಜಂಕ್ಷನ್‌ನಲ್ಲಿ ಈ ಘಟನೆ ಸಂಭವಿಸಿದ್ದು, ಬಿಹಾರ ಪೊಲೀಸ್‌ನಲ್ಲಿ ಕಾನ್‌ಸ್ಟೆಬಲ್ ಆಗಿರುವ ಮಹಿಳೆ ಮತ್ತು ಆಕೆ ಪತಿ ಸಿಆರ್‌ಪಿಎಫ್ ಯೋಧ ರೈಲ್ವೇ ಫ್ಲ್ಯಾಟ್‌ಫಾರ್ಮ್‌ನಲ್ಲಿ ನಿಂತು ಜಗಳವಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಅಲ್ಲಿದ್ದ ಪ್ರತ್ಯಕ್ಷದರ್ಶಿಗಳ ಪ್ರಕಾರ ಮಹಿಳೆ ತನ್ನ ಪ್ರಿಯತಮನ ಜತೆ ಓಡಿ ಹೋಗಲು ಯತ್ನಿಸುತ್ತಿದ್ದಳು. ಈ ವಿಚಾರ ತಿಳಿದು ಅಲ್ಲಿಗೆ ಬಂದ ಯೋಧ ಜೋರಾಗಿ ಗಲಾಟೆ ಮಾಡಿದ್ದಾರೆ.
ಇನ್ನು ಯೋಧನನ್ನು ನೋಡುತ್ತಿದ್ದಂತೆ ಮಹಿಳೆಯ ಪ್ರಿಯಕರ ಸ್ಥಳದಿಂದ ಓಡಿಹೋಗಲು ಯತ್ನಿಸಿದ್ದಾನೆ. ಆದರೆ ಆತನನ್ನು ಹಿಡಿದ ಯೋಧ ಮಾರಣಾಂತಿಕವಾಗಿ ಥಳಿಸಿದ್ದಾನೆ. ರೈಲ್ವೇ ನಿಲ್ದಾಣದಲ್ಲಿ ನೆರೆದಿದ್ದ ಅಪಾರ ಜನಸಮೂಹದ ಮುಂದೆ ಆತ ಆ ವ್ಯಕ್ತಿಗೆ ಕಪಾಳಮೋಕ್ಷ ಮಾಡಿ ಒದೆಯಲಾರಂಭಿಸಿದ. ಪ್ಲಾಟ್‌ಫಾರ್ಮ್‌ನಲ್ಲಿ ವ್ಯಕ್ತಿಯನ್ನು ಥಳಿಸಿದುದನ್ನು ಏಕಾಏಕಿ ಥಳಿಸುತ್ತಿರುವುದನ್ನು ಕಂಡು ಅಲ್ಲಿದ್ದ ಜನ ಬೆಚ್ಚಿಬಿದ್ದಿದ್ದರು. ಅದಾದ ಬಳಿಕ ವಿಷಯ ಏನೆಂಬುದು ಅವರಿಗೆ ಅರ್ಥವಾಗಿತ್ತು.
ಇನ್ನು ಈ ಜಗಳವನ್ನು ಬಿಡಿಸುವ ಬದಲು ಅಲ್ಲಿ ನೆರೆದಿದ್ದ ಜನ ತಮ್ಮ ಮೊಬೈಲ್‌ನಲ್ಲಿ ಆ ದೃಶ್ಯವನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ಪ್ಲಾಟ್‌ಫಾರ್ಮ್‌ನಲ್ಲಿ ಸಿಆರ್‌ಪಿಎಫ್ ಯೋಧ ತನ್ನ ಪ್ರಿಯಕರನನ್ನು ಥಳಿಸಿದ ನಂತರ ಪತ್ನಿಯೊಂದಿಗೆ ತೀವ್ರ ವಾಗ್ವಾದದಲ್ಲಿ ತೊಡಗಿರುವುದನ್ನು ವೀಡಿಯೊ ಕಾಣಬಹುದಾಗಿದೆ. ನಿಲ್ದಾಣದಲ್ಲಿ ಕೆಲಕಾಲ ಹೈಡ್ರಾಮಾ ಮುಂದುವರಿದಿದ್ದು, ನಂತರ ಸಿಆರ್‌ಪಿಎಫ್ ಜವಾನ ಪತ್ನಿಯನ್ನು ತನ್ನೊಂದಿಗೆ ಎಳೆದೊಯ್ದಿದ್ದಾನೆ. ದಂಪತಿ ಹೋದ ನಂತರ ವ್ಯಕ್ತಿಯೂ ಸ್ಥಳದಿಂದ ಪರಾರಿಯಾಗಿದ್ದಾನೆ.
ಮಹಿಳೆ ತನ್ನ ಪ್ರಿಯಕರನೊಂದಿಗೆ ಲಿಂಕ್ ಎಕ್ಸ್‌ಪ್ರೆಸ್‌ನಲ್ಲಿ ಸಿಂಗ್ರೌಲಿಗೆ ಓಡಿಹೋಗಲು ಪ್ರಯತ್ನಿಸುತ್ತಿದ್ದಳು ಎನ್ನಲಾಗಿದೆ. ಆದರೆ ಕೊನೆಯ ಕ್ಷಣದಲ್ಲಿ ಎಲ್ಲವೂ ಉಲ್ಟಾ ಹೊಡೆದಿತ್ತು. ಇನ್ನು ಘಟನೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ.