ದ್ವಿಚಕ್ರ ವಾಹನದಲ್ಲಿ ಕೊಂಡೊಯ್ಯುತ್ತಿದ್ದ ಪಟಾಕಿ ಸ್ಫೋಟಗೊಂಡು ಓರ್ವ ವ್ಯಕ್ತಿ ಮೃತಪಟ್ಟಿರುವ ಘಟನೆ ಗುರುವಾರ ಎಲುರು ಪಟ್ಟಣದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೀಪಾವಳಿ ಸಂಭ್ರಮವನ್ನು ಆಚರಿಸಲು ಇಬ್ಬರು ವ್ಯಕ್ತಿಗಳು ದ್ವಿಚಕ್ರ ವಾಹನದಲ್ಲಿ ಪಟಾಕಿಯನ್ನು ಕೊಂಡೊಯ್ಯುವಾಗ ಈ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗಿದೆ.
ಪಟಾಕಿ ಚೀಲ ಕೆಳಗೆ ಬಿದ್ದಾಗ ಅದರಲ್ಲಿದ್ದ ನೀರುಳ್ಳಿ ಪಟಾಕಿಗಳು ಸಿಡಿದವು. ಅದರೊಂದಿಗೆ ಇತರ ಪಟಾಕಿಗಳು ಕೂಡ ಸಿಡಿದವು. ಇದರಿಂದ ದ್ವಿಚಕ್ರ ವಾಹನದ ಸವಾರ ಸ್ಥಳದಲ್ಲೇ ಮೃತಪಟ್ಟ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ಘಟನೆಯಲ್ಲಿ ಹಿಂಬದಿ ಸವಾರ ಹಾಗೂ ರಸ್ತೆಯ ಬದಿ ನಿಂತಿದ್ದ ಇಬ್ಬರಿಗೆ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯ ವಿಡಿಯೊ ವೈರಲ್ ಆಗಿದ್ದು, ಪಟಾಕಿ ಸ್ಫೋಟದ ಕ್ಷಣ ದಾಖಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.