ಧಾರ್ಮಿಕ ಕಾರ್ಯಕ್ರಮದ ವೇಳೆ ಶಾಸಕ ಬಸನಗೌಡಾ ಯತ್ನಾಳ ಅವರು ವಕ್ಫ್ ವಿಚಾರ ಪ್ರಸ್ತಾಪಿಸಿದ್ದಕ್ಕೆ ಆಕ್ಷೇಪಣೆ ವ್ಯಕ್ತವಾಗಿದೆ. ಇದರಿಂದ ಮುಜುಗರಕ್ಕೀಡಾದ ಅವರು ಸ್ಟೇಜ್ ಬಿಟ್ಟು ತೆರಳಿರುವ ಪ್ರಸಂಗ ನಡೆದಿದೆ.
ಧಾರ್ಮಿಕ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ವಕ್ಫ್ ವಿಚಾರ ಪ್ರಸ್ತಾಪಿಸುತ್ತಿದ್ದಂತೆ ಸಾರ್ವಜನಿಕರು ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ತೇರದಾಳ ಪಟ್ಟಣದಲ್ಲಿ ನಡೆದಿದೆ.
ಅಲ್ಲಮಪ್ರಭು ದೇವಸ್ಥಾನ ಉದ್ಘಾಟನೆಗೆ ಆಗಮಿಸಿದ್ದ ಯತ್ನಾಳ್, ತಮ್ಮ ಭಾಷಣದಲ್ಲಿ 8 ಎಕರೆ ವಕ್ಫ್ ಅಂತಾ ನಮೂದಾಗಿತ್ತು. ಈ ರೀತಿ ಕಾಂಗ್ರೆಸ್‌ನವರು ಮಾಡ್ಕೊಂತ ಹೊಂಟಾರ ಎನ್ನುತ್ತಿರುವಾಗಲೇ ತಡೀರಿ. ರಾಜಕೀಯ ಮಾತನಾಡಬೇಡಿ ಎಂದು ಸಾರ್ವಜನಿಕರ ಆಕ್ಷೇಪ ವ್ಯಕ್ತಪಡಿಸಿದರು.
ಇದು ರಾಜಕೀಯನಾ ಎಂದು ಮರು ಪ್ರಶ್ನೆ ಹಾಕಿದ ಯತ್ನಾಳ್ ಮಾತಿಗೆ ಹೌದು, ನೀವು ಮಾತನಾಡುತ್ತಿರುವುದು ರಾಜಕೀಯ ಎಂದು ವಿರೋಧಿಸಿದರು. ಸರಿ ಎಂದು ಮುಜುಗರಕ್ಕೀಡಾದ ಯತ್ನಾಳ್ ಅವರು ಮೈಕ್ ಬಿಟ್ಟು ಅಲ್ಲಿಂದ ನಿರ್ಗಮಿಸಿದರು. ಸರ್ವ ಧರ್ಮಿಯರೆಲ್ಲಾ ಸೇರಿ ವಂತಿಗೆ ಮೂಲಕ ನಿರ್ಮಿಸಿರುವ ದೇವಾಲಯ ಇದು. ಇಲ್ಲಿ ರಾಜಕೀಯ ಮಾಡಬೇಡಿ ಎಂದು ಯತ್ನಾಳ್ ಅವರಿಗೆ ಭಕ್ತರು ಕ್ಲಾಸ್ ತೆಗೆದುಕೊಂಡ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.