
ತಿ ರುವನಂತಪುರಂ: ಅಮ್ಮು ಸಜೀವ್ (21) ಎಂಬ ಯುವತಿ, ನರ್ಸಿಂಗ್ ಕೋರ್ಸ್ ಪೂರ್ಣಗೊಳಿಸಲು ಕೇವಲ ಒಂದೇ ಒಂದು ತಿಂಗಳು ಬಾಕಿ ಇದ್ದಂತೆಯೇ ಇದೀಗ ಸಾವಿಗೆ ಶರಣಾಗುವ ಮೂಲಕ ತನ್ನ ಆಸೆ, ಕನಸ್ಸುಗಳನ್ನು ನುಚ್ಚನೂರು ಮಾಡಿಕೊಂಡಿದ್ದಾಳೆ. ಪತ್ತನಂತಿಟ್ಟ ಎಸ್‌ಎಂಇ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿ ಹಾಗೂ ತಿರುವನಂತಪುರದ ಐರೂರ್‌ಪಾರ ರಾಮಪುರತುಪೊಯ್ಕಾ ಶಿವಂ ಮನೆಯ ಸಜೀವ್ ಮತ್ತು ರಾಧಾಮಣಿ ದಂಪತಿಯ ಪುತ್ರಿ ಅಮ್ಮು, ಶುಕ್ರವಾರ (ನ.15) ಹಾಸ್ಟೆಲ್ ಕಟ್ಟಡದಿಂದ ಬಿದ್ದು ಮೃತಪಟ್ಟಿದ್ದಾಳೆ.
ಈ ಬಗ್ಗೆ ತನಿಖೆ ಆಗಬೇಕೆಂದು ಪಟ್ಟುಹಿಡಿದಿರುವ ಆಕೆಯ ಪೋಷಕರು, ಸಾವಿನಲ್ಲಿ ನಿಗೂಢತೆ ಇದೆ ಎಂದು ಆರೋಪಿಸಿದ್ದಾರೆ.
ಹಾಸ್ಟೆಲ್‌ನಲ್ಲಿದ್ದ ಸಹ ವಿದ್ಯಾರ್ಥಿಗಳ ಕಿರುಕುಳವೇ ಮಗಳ ಸಾವಿಗೆ ಕಾರಣ ಎಂದು ಕುಟುಂಬಸ್ಥರು ವಾದಿಸಿದ್ದಾರೆ. ಹಾಸ್ಟೆಲ್‌ನಲ್ಲಿರುವ ಇಬ್ಬರು ವಿದ್ಯಾರ್ಥಿಗಳ ವಿರುದ್ಧ ಮೃತ ಅಮ್ಮು ತಂದೆ ಈ ಹಿಂದೆ ಪ್ರಾಂಶುಪಾಲರಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕಾಲೇಜು ಪ್ರಾಂಶುಪಾಲರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅಮ್ಮುಗೆ ಆಕೆಯ ಕೆಲವು ಸಹಪಾಠಿಗಳು ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದರು ಎಂದು ಪೋಷಕರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖವಾಗಿದೆ.
ಆತ್ಮಹತ್ಯೆಯೇ ಎಂಬುದು ನಮಗೆ ದೃಢವಿಲ್ಲ
ರಾತ್ರಿ ಹಾಸ್ಟೆಲ್ ಕಟ್ಟಡದ ಮೇಲಿನಿಂದ ಬಿದ್ದು ಸಾಯುವ ಮೊದಲು ಸಂಜೆ 4 ಗಂಟೆಗೆ ತನ್ನ ತಂದೆ-ತಾಯಿ ಮತ್ತು ಸಹೋದರನೊಂದಿಗೆ ದೂರವಾಣಿಯಲ್ಲಿ ಅಮ್ಮು ಮಾತನಾಡಿದ್ದಾಳೆ. ಆಕೆಯ ಧ್ವನಿಯಲ್ಲಿ ಯಾವುದೋ ಸಂಕಟ, ದುಗುಡತೆ ಕೇಳಿಬಂದಿಲ್ಲ. ಹೀಗಾಗಿ ಇದು ಆತ್ಮಹತ್ಯೆಯೇ ಎಂಬುದು ನಮಗೆ ದೃಢವಿಲ್ಲ ಎಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಕಟ್ಟಡದಿಂದ ಬಿದ್ದ ರಭಸಕ್ಕೆ ಯುವತಿಯ ಕಾಲಿಗೆ ತೀವ್ರ ಪೆಟ್ಟಾಗಿತ್ತು. ಗಂಭೀರ ಗಾಯಗಳಿಂದ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಅಮ್ಮುಳನ್ನು ತಿರುವನಂತಪುರದ ಆಸ್ಪತ್ರೆಗೆ ಸ್ಥಳಾಂತರಿಸಲು ಸಲಹೆ ನೀಡಲಾಯಿತು.
ಸತ್ಯಾಂಶ ಹೊರಬರಲಿದೆ
ನಂತರ ಆಕೆಯನ್ನು ಐಸಿಯು ಆಂಬ್ಯುಲೆನ್ಸ್‌ನಲ್ಲಿ ತಿರುವನಂತಪುರಂ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು. ಆದ್ರೆ, ಅಲ್ಲಿಗೆ ತಲುಪುವ ವೇಳೆ ಅಮ್ಮು ಮೃತಪಟ್ಟಿದ್ದಾಳೆ. ವೈದ್ಯರ ಪರೀಕ್ಷೆಯಲ್ಲಿ ಆಕೆ ಸಾವಿಗೀಡಾಗಿರುವುದು ದೃಢಪಟ್ಟಿದೆ. ಕುಟುಂಬದವರ ಗಂಭೀರ ಆರೋಪದ ಮೇರೆಗೆ ಇದೀಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸರ ತನಿಖೆಯಿಂದ ಸತ್ಯಾಂಶ ಹೊರಬರಲಿದೆ ಎಂದು ಕಾಲೇಜು ಪ್ರಾಂಶುಪಾಲರು ಮಾಧ್ಯಮಗಳಿಗೆ ತಿಳಿಸಿದ್ದಾರೆ.






