ಬೆಳಗಾವಿ, ನವೆಂಬರ್ 18: ಬೆಳಗಾವಿ ತಹಶಿಲ್ದಾರ್ ಕಚೇರಿಯಲ್ಲಿ ಎಸ್‌ಡಿಎ ರುದ್ರೇಶ್ (ರುದ್ರಣ್ಣ ಯಡವಣ್ಣವರ) ಆತ್ಮಹತ್ಯೆ ಪ್ರಕರಣಕ್ಕೆ ಇದೀಗ ದೊಡ್ಡ ತಿರುವು ದೊರೆಯುವ ಸುಳಿವು ದೊರೆತಿದೆ. ‘ರುದ್ರೇಶ್ ಆತ್ಮಹತ್ಯೆ ಮಾಡಿಕೊಂಡಿಲ್ಲ ಕೊಲೆ’ ಎಂಬ ಒಕ್ಕಣೆಯುಳ್ಳ ಅನಾಮಧೇಯ ಪತ್ರವೊಂದು ರಾಜ್ಯಪಾಲರು, ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು, ನಗರ ಪೊಲೀಸ್ ಆಯುಕ್ತರು, ಜಿಲ್ಲಾಧಿಕಾರಿ, ಪ್ರಕರಣದ ತನಿಖಾಧಿಕಾರಿ ಸೇರಿ ಹಲವರಿಗೆ ಬಂದಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಪೊಲೀಸರ ನಿದ್ದೆಗೆಡಸಿದ ಅನಾಮಧೇಯ ಪತ್ರ

ಪ್ರಕರಣದ ಎ1 ತಹಶಿಲ್ದಾರ ಬಸವರಾಜ ನಾಗರಾಳ, ಎ2 ಅಶೋಕ ಕಬ್ಬಲಿಗೇರ್, ಎ3 ಹೆಬ್ಬಾಳ್ಕರ್ ಪಿಎ ಸೋಮುಗೆ ಜಾಮೀನು ಸಿಕ್ಕ ಕೆಲವೇ ದಿನಗಳಲ್ಲಿ ಈ ಪತ್ರ ಬಂದಿರುವುದು ಗೊತ್ತಾಗಿದೆ. ಅಂಚೆ ಮೂಲಕ ಅನಾಮಧೇಯ ವ್ಯಕ್ತಿಯ ಪತ್ರ ಬಂದಿದೆ.

ಅನಾಮಧೇಯ ಪತ್ರದಲ್ಲೇನಿದೆ?

ಅನಾಮಧೇಯ ಪತ್ರದಲ್ಲಿ, ‘ರುದ್ರೇಶ್ ಆತ್ಮಹತ್ಯೆ ಮಾಡಿಕೊಂಡಿಲ್ಲ ಕೊಲೆ. ತಹಶಿಲ್ದಾರ್ ಆಪ್ತ ಡ್ರೈವರ್ ಯಲ್ಲಪ್ಪ ಬಡಸದ ಕೊಲೆಗೆ ಸೂತ್ರದಾರ. ತಹಶಿಲ್ದಾರರ ಜೀಪ್ ಚೆಕ್ ಮಾಡಿದರೆ ಎಲ್ಲಾ ಸಿಗುತ್ತವೆ. ಅದು ಸೂಸೈಡ್ ಅಂತಿದ್ದಾರೆ. ಆದರೆ, ಆದ್ರೇ ಆತ್ಮಹತ್ಯೆ ಅಲ್ಲ. ಡ್ರೈವರ್ ಯಲ್ಲಪ್ಪನ ವಿಚಾರಣೆ ಮಾಡಿದರೆ ಕೊಲೆ ರಹಸ್ಯ ಹೊರಗೆ ಬರುತ್ತದೆ. ಯಲ್ಲಪ್ಪನ ಹೆಂಡತಿ ಅನೈತಿಕ ಸಂಬಂಧ ಇಟ್ಟುಕೊಂಡು ಅವನ ಎಲ್ಲ ದುಡ್ಡು ಹೊಡೆದಿರುತ್ತಾಳೆ. ಸತ್ತವನಿಗೆ ನ್ಯಾಯ ಸಿಗಬೇಕು ಕೇಸ್ ಮುಚ್ಚಿ ಹಾಕಬಾರದು’ ಎಂದು ಉಲ್ಲೇಖಿಸಲಾಗಿದೆ. ಅನಾಮಧೇಯ ಪತ್ರದಲ್ಲಿನ ಅಂಶಗಳು ಕಂಡು ಇದೀಗ ಪೊಲೀಸರು ದಂಗಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ನವೆಂಬರ್ 14ರಂದು ಷರತ್ತುಬದ್ಧ ನಿರೀಕ್ಷಣಾ ಜಾಮೀನು ದೊರೆತಿತ್ತು.

ರುದ್ರೇಶ್ ಆತ್ಮಹತ್ಯೆ ಪ್ರಕರಣ ಹಿನ್ನೆಲೆ

ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ ಎಸ್‌ಡಿಎ (ದ್ವಿತೀಯ ದರ್ಜೆ ಸಹಾಯಕ) ರುದ್ರೇಶ್ (ರುದ್ರಣ್ಣ) ಯಡಣ್ಣನವರ್ ಎಂಬವರು ನವೆಂಬರ್ 5ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದಕ್ಕೂ ಮುನ್ನ ಅವರು, ತನ್ನ ಸಾವಿಗೆ ಇವರೇ ಕಾರಣ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪಿಎ ಸೋಮು, ತಹಶಿಲ್ದಾರ್ ಬಸವರಾಜ ನಾಗರಾಳ, ಸಹೊದ್ಯೋಗಿ ಅಶೋಕ ಕಬ್ಬಲಿಗೇರ್ ಹೆಸರು ಉಲ್ಲೇಖಿಸಿ ವಾಟ್ಸ್ಆಯಪ್ ಗ್ರೂಪೊಂದರಲ್ಲಿ ಸಂದೇಶ ಕಳುಹಿಸಿದ್ದರು.

ವರ್ಗಾವಣೆ ಆದೇಶ ನೋಡಿದ ನಂತರ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಾಟ್ಸ್ಆಯಪ್ ಗ್ರೂಪ್ನಲ್ಲಿ ಮೆಸೇಜ್ ಮಾಡಿದ್ದ ಅವರು ಮರುದಿನ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪಿಎ ಹೆಸರು ಕೇಳಿಬಂದ ಕಾರಣ ಪ್ರಕರಣ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

Leave a Reply

Your email address will not be published. Required fields are marked *

Join WhatsApp Group
error: Content is protected !!