
ದ ಕ್ಷಿಣ ಕೊರಿಯಾ ಮೂಲದ ಕಿಯಾ (Kia) ಪ್ರಮುಖ ಕಾರು ತಯಾರಕ ಕಂಪನಿಯಾಗಿದೆ. ಭಾರತದ ಮಾರುಕಟ್ಟೆಗೆ 2019ರಲ್ಲಿ ಅಧಿಕೃತವಾಗಿ ಪ್ರವೇಶವನ್ನು ಮಾಡಿತು. ಆಂಧ್ರ ಪದೇಶಯಲ್ಲಿ ಉತ್ಪಾದನಾ ಘಟಕವನ್ನು ಹೊಂದಿದ್ದು, ಸೋನೆಟ್ ಮತ್ತು ಸೆಲ್ಟೋಸ್ ಸೇರಿದಂತೆ ವಿವಿಧ ಕಾರುಗಳನ್ನು ಯಶಸ್ವಿಯಾಗಿ ಮಾರಾಟ ಮಾಡುತ್ತಿದೆ.
ಸದ್ಯ ಕಂಪನಿಯು ಹೊಚ್ಚ ಹೊಸ ಸೈರಸ್ (Syros) ಎಸ್‌ಯುವಿಯನ್ನು ಕೂಡ ಪರಿಚಯಿಸಲು ತೆರೆಮರೆಯಲ್ಲಿ ಸಿದ್ಧತೆ ನಡೆಸುತ್ತಿದೆ. ಈ ಕಾರಿನ ಕುರಿತಂತೆ ಮಹತ್ವದ ಮಾಹಿತಿಯೊಂದು ಲಭ್ಯವಾಗಿದೆ.
ದೇಶೀಯ ಮಾರುಕಟ್ಟೆಯಲ್ಲಿ ನೂತನ ಕಿಯಾ ಸೈರಸ್ (Kia Syros) ಎಸ್‌ಯುವಿಯನ್ನು ಡಿಸೆಂಬರ್ 19 ರಂದು ಅಧಿಕೃತವಾಗಿ ಅನಾವರಣಗೊಳಿಸಲು ದಿನಾಂಕ ನಿಗದಿಪಡಿಸಲಾಗಿದೆ. ಆ ಬಳಿಕ, ಅದ್ದೂರಿಯಾಗಿ ಬಿಡುಗಡೆ ಮಾಡಲಾಗುತ್ತದೆ. ವಿಶೇಷವಾಗಿ ಈ ಕಾರು ಹಲವಾರು ಬಾರಿ ಪ್ರಾಯೋಗಿಕ ಸಂಚಾರವನ್ನು ನಡೆಸುವಾಗಲೂ ಸಹ ಕಂಡುಬಂದಿದೆ.
ವಿನ್ಯಾಸ (Design): ಹೊಸ ಕಿಯಾ ಸೈರಸ್ ಎಸ್‌ಯುವಿ ಹೊರಭಾಗದಲ್ಲಿ ಆಕರ್ಷಕವಾದ ವಿನ್ಯಾಸವನ್ನು ಹೊಂದಿರುವ ನಿರೀಕ್ಷೆಯಿದೆ. ಈ ಕಾರು ಉತ್ತಮವಾಗಿರುವ ಎಲ್‌ಇಡಿ ಹೆಡ್‌ಲೈಟ್‌ಗಳು,ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಎಲ್‌ಇಡಿ ಟೈಲ್‌ಲ್ಯಾಂಪ್‌ಗಳನ್ನು ಒಳಗೊಂಡಿರಬಹುದು. ಜೊತೆಗೆ ಫ್ಲಶ್-ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳು ಹಾಗೂ ಡ್ಯುಯಲ್-ಟೋನ್ ಅಲಾಯ್ ವೀಲ್‌ಗಳನ್ನು ಪಡೆದಿರಬಹುದು ಎನ್ನಲಾಗಿದೆ.
ಕಾರ್ಯಕ್ಷಮತೆ (Performance): ಈ ಸೈರಸ್ ಕಾರು ಶಕ್ತಿಯುವ ಪವರ್‌ಟ್ರೇನ್ ಆಯ್ಕೆಯನ್ನು ಒಳಗೊಂಡಿರುವ ಸಾಧ್ಯತೆಯಿದೆ. 1.2-ಲೀಟರ್ 4-ಸಿಲಿಂಡರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್, 1.0-ಲೀಟರ್ ಜಿಡಿಐ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಒಳಗೊಂಡಿರಬಹುದು. 5-ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿರಬಹುದು ಎಂದು ಹೇಳಲಾಗಿದೆ.
ವೈಶಿಷ್ಟ್ಯಗಳು (Features): ನೂತನ ಕಿಯಾ ಸೈರಸ್ ಎಸ್‌ಯುವಿ ಹತ್ತಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿರುವ ನೀರಿಕ್ಷೆಯಿದೆ. ಪ್ರಮುಖವಾಗಿ ಇನ್ಫೋಟೈನೆಮೆಂಟ್ ಸಿಸ್ಟಮ್ & ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ ಡುಯಲ್ ಸ್ಕ್ರೀನ್ (10.25-ಇಂಚು), ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್ ಮತ್ತು 360-ಡಿಗ್ರಿ ಕ್ಯಾಮೆರಾ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ ಎನ್ನಲಾಗಿದೆ.
ಸುರಕ್ಷತಾ ವೈಶಿಷ್ಟ್ಯಗಳು (Safety Features): ಈ ಕಾರು ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸಲಿದೆ. ಸುರಕ್ಷತೆಯ ದೃಷ್ಟಿಯಿಂದ 6-ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ರೇರ್ ಪಾರ್ಕಿಂಗ್ ಸೆನ್ಸರ್ಸ್ ಮತ್ತು ಸೀಟ್‌ಬೆಲ್ಟ್ ರಿಮೈಂಡರ್ ಸಿಸ್ಟಮ್‌ನಂತಹ ಹಲವು ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವ ಸಾಧ್ಯತೆಯಿದೆ.ಬೆಲೆ & ಆಸನ ಆಯ್ಕೆ (Price & Seating Capacity): ಹೊಸ ಕಿಯಾ ಸೈರಸ್ ಎಸ್‌ಯುವಿ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗಲಿದೆ ಎಂದು ಹೇಳಲಾಗಿದೆ. ಇದು ರೂ. 6 ಲಕ್ಷದಿಂದ ರೂ.10 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಒಳಗೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಇದರೊಟ್ಟಿಗೆ 5/ 7 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿರಬಹುದು ಎನ್ನಲಾಗಿದೆ.
ಇನ್ನು, ಮುಂಬರುವ ಕೆಲವೇ ದಿನಗಳಲ್ಲಿ ಅನಾವರಣಗೊಳ್ಳುವ ಕಿಯಾ ಸೈರಸ್ ಎಸ್‌ಯುವಿ ಮೇಲೆ ಗ್ರಾಹಕರ ನೀರಿಕ್ಷೆಗಳು ದುಪ್ಪಟಾಗಿವೆ. ಈ ಕಾರು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳೊಂದಿಗೆ ಮಾರಾಟಕ್ಕೆ ಬರುವುದು ಬಹುತೇಕ ಖಚಿತವಾಗಿದೆ. ನೂತನ ‘ಸೈರಸ್’ ಬಿಡುಗಡೆಯಾದ ಮೇಲೆ ದೇಶೀಯ ಗ್ರಾಹಕರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.






