ಗ್ವಾಲಿಯರ್: ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ನಲ್ಲಿ ನಿರ್ಮಾಣವಾಗಿರುವ ಬಹು ನಿರೀಕ್ಷಿತ ಪುಷ್ಪ 2 ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಿದೆ. ಈ ನಡುವೆ ಕರ್ನಾಟಕದಲ್ಲಿಯೂ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗಿದೆ. ಕನ್ನಡಕ್ಕೆ ಡಬ್ ಆದರೂ, ತೆಲುಗು ಅವತರಣಿಕೆಯೇ ಕರ್ನಾಟಕದಾದ್ಯಂತ ರಿಲೀಸ್ ಆಗಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ಸೇರಿ ಇನ್ನೂ ಹಲವು ಸ್ಟಾರ್ ನಟರು ನಟಿಸಿರುವ ಈ ಸಿನಿಮಾವನ್ನು ಸುಕುಮಾರ್ ನಿರ್ದೇಶನ ಮಾಡಿದ್ದಾರೆ. ಮೊದಲ ಭಾಗ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಇದೀಗ ಮೂರು ವರ್ಷದ ಬಳಿಕ ಟಾಲಿವುಡ್ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಪುಷ್ಪ 2 ದಿ ಸಿನೆಮಾ ಇಂಡಸ್ಟ್ರಿಯನ್ನು ರೂಲ್ ಮಾಡುತ್ತಿದೆ .
ಜೊತೆಗೆ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದು, ಪುಷ್ಪರಾಜ್ನ ರೌದ್ರಾವತಾರಕ್ಕೆ ಶಿಳ್ಳೆ, ಚಪ್ಪಾಳೆ ಅಬ್ಬರವೇ ಆಗುತ್ತಿದೆ.
ಆದರೆ ದುರಾದೃಷ್ಟವಶಾತ್ ಥಿಯೇಟರ್ಗಳಲ್ಲಿ ನೂಕು ನುಗ್ಗಲು ಉಂಟಾಗಿದ್ದು, ದುಖಕರ ಸಂಗತಿ ಎಂದರೆ ಸಿನಿಮಾ ಪ್ರದರ್ಶನ ವೇಳೆ ಸಂಭಂವಿಸಿದ ದುರಂತದಲ್ಲಿ ಈಗಾಗಲೇ ಇಬ್ಬರು ಮೃತಪಟ್ಟಿದ್ದು, ಈಗ ಮತ್ತೊಂದು ಅವಘಡ ವರದಿಯಾಗಿದೆ. ಹೌದು, ಸಿನೆಮಾ ನೋಡಲು ಬಂದ ಪ್ರೇಕ್ಷಕ ಹಾಗೂ ಥಿಯೇಟರ್ ಸಿಬ್ಬಂದಿ ನಡುವೆ ಜಗಳವಾಗಿದ್ದು, ಹಲ್ಲೆಯಲ್ಲಿ ಘಟನೆ ಅಂತ್ಯವಾಗಿದೆ..
ಮಧ್ಯಪ್ರದೇಶದ ಗ್ವಾಲಿಯರ್ನ ಫಾಲ್ಕಾ ಬಜಾರ್ ಪ್ರದೇಶದ ಕಾಜಲ್ ಟಾಕೀಸ್ನಲ್ಲಿ ಈ ದುರ್ಘಟನೆ ನಡೆದಿದ್ದು, ಶಬ್ಬೀರ್ ಖಾನ್ ಅನ್ನು ಹಲ್ಲೆಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಇಲ್ಲಿನ ಗುಡ ಗುಡಿ ನಾಕ ಪ್ರದೇಶದ ನಿವಾಸಿಯಾಗಿರುವ ಶಬ್ಬೀರ್ ಪುಷ್ಪ 2 ನೋಡಲ ಥಿಯೇಟರ್ ಗೆ ತೆರಳಿದ್ದಾನೆ. ಚಿತ್ರದ ಮಧ್ಯಂತರದಲ್ಲಿ ಈತ ಸ್ನ್ಯಾಕ್ಸ್ ತರೆಲೆಂದು ಥಿಯೇಟರ್ ಕ್ಯಾಂಟೀನ್ ಗೆ ಹೋಗಿದ್ದ ಸಂದರ್ಭದಲ್ಲಿ ಅಲ್ಲಿ ಕ್ಯಾಂಟೀನ್ ಸಿಬ್ಬಂದಿಗಳಾದ ರಾಜು, ಚಂದನ್ ಹಾಗೂ ಎಂ.ಎ. ಖಾನ್ ಮತ್ತು ಶಬ್ಬೀರ್ ನಡುವೆ ವಾಗ್ವಾದ ನಡೆದಿದೆ.
ಮಾತಿಗೆ ಮಾತು ಬೆಳೆದು ಈ ಜಗಳ ಕೈ-ಕೈ ಮಿಲಾಯಿಸುವ ಹಂತದವರೆಗೆ ಹೋಗಿದೆ. ಈ ಸಂದರ್ಭದಲ್ಲಿ ಈ ಮೂವರು ಶಬ್ಬೀರ್ ಮೇಲೆ ದಾಳಿ ನಡೆಸಿ, ಆತನ ಕಿವಿಯನ್ನೇ ಕಚ್ಚಿದ್ದಾರೆ, ಇದರಿಂದಾಗಿ ಆತನಿಗೆ ತೀವ್ರ ಸ್ವರೂಪದ ರಕ್ತಸ್ರಾವವಾಗಿದೆ.
ಇದು ಪುಷ್ಪ-2 ಸಿನೆಮಾದಲ್ಲಿ ನಟ ಅಲ್ಲು ಅರ್ಜುನ್ ಮತ್ತು ವಿರೋಧಿಗಳ ನಡುವಿನ ಫೈಟ್ ಸೀನೊಂದರಲ್ಲಿ ಅಲ್ಲು ಅರ್ಜುನ್ ಎದುರಾಳಿಯ ಕಿವಿ ಕಚ್ಚುವ ದೃಶ್ಯವಿದೆ. ಇದೇ ರೀತಿ ನಿಜವಾಗಿಯೂ ನಡೆದಿರುವುದು ದುರಂತವೇ ಸರಿ.
ಈ ಘಟನೆ ನಡೆದ ತಕ್ಷಣವೇ ಗಾಯಾಳು ಶಬ್ಬೀರ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಲ್ಲಿ ಆತನ ಕಿವಿಗೆ ಎಂಟು ಹೊಲಿಗೆಗಳನ್ನು ಹಾಕಲಾಗಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡ ಬಳಿಕ ಶಬ್ಬೀರ್ ಇಲ್ಲಿನ ಇಂದೆರ್ ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಂತ್ರಸ್ತನ ಹೇಳಿಕೆ ಮತ್ತು ವೈದ್ಯಕೀಯ ವರದಿಗಳ ಆಧಾರದಲ್ಲಿ, ಪೊಲೀಸರು ಆರೊಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 294, 323 ಹಾಗೂ 34ರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಶಬ್ಬೀರ್, ಚಿತ್ರದಲ್ಲಿ ತೋರಿಸುವ ಹಿಂಸಾತ್ಮಕ ದೃಶ್ಯಗಳು ಸಮಾಜದಲ್ಲಿ ಜನರ ಮೇಲೆ ದುಷ್ಪರಿಣಾಮವನ್ನು ಬೀರುತ್ತಿದೆ ಎಂದು ದೂರಿದ್ದಾನೆ ಘಟನೆಗೆ ಸಂಬಂಧಿಸಿದಂತೆ ಆರೊಪಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.