ವರ್ಕ್ ಫ್ರಂ ಹೋಮ್ ಹೆಸರಿನಲ್ಲಿ ವಂಚಕರು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಮಹಿಳೆಯರಿಗೆ ಸುಮಾರು 20 ಲಕ್ಷ ರುಪಾಯಿ ವಂಚಿಸಿರುವ ಘಟನೆ ನಡೆದಿದೆ. ಕನಕಪುರ ತಾಲೂಕು ದೊಡ್ಡ ಆನಮಾನಹಳ್ಳಿ ವಾಸಿ ಎಸ್.ಶಾಲಿನಿ 16,55,556 ರು., ಹಾಗೂ ಚನ್ನಪಟ್ಟಣ ಟೌನ್ ಮದೀನ ಚೌಕ್ ವಾಸಿ ಶಾಹಿದಾ ಬಾನು 3,46,000 ರು.ಹಣ ಕಳೆದುಕೊಂಡವರು.
ಡಿ.10ರಂದು ಶಾಲಿನಿರವರು ಮೊಬೈಲ್ ನಂಬರ್ ಗೆ ಕರೆ ಮಾಡಿರುವ ವಂಚಕರು ವರ್ಕ್ ಫ್ರಂ ಹೋಮ್ ಕೆಲಸ ಇದೆ ಮಾಡುತ್ತೀರಾ ಎಂದು ಕೇಳಿದ್ದಾರೆ. ಕೆಲಸ ಮಾಡಲು ಒಪ್ಪಿದ ಶಾಲಿನಿ ಮೊಬೈಲ್ ವಾಟ್ಸ್ ಆಪ್ ನಲ್ಲಿ ಲಿಂಕ್ ಕಳುಹಿಸಿ ಟೆಲಿಗ್ರಾಮ್ ಗ್ರೂಪ್ ಗೆ ಆಡ್ ಆಗಿದ್ದಾರೆ. ಒಂದು ರೀವಿವ್ಯೂಗೆ 40 ರು.ನಂತೆ 1 ರಿಂದ 6 ಟಾಸ್ಕ್ 5 ಗೂಗಲ್ ರಿವ್ಯೂಗಳು ಮತ್ತು 1 ಡಾಟಾ ಟಾಸ್ಕ್ ಮಾಡಿದರೆ 500 ರು. ಹಣ ನೀಡುವುದಾಗಿ ವಂಚಕರು ಹೇಳಿದ್ದಾರೆ.
ಒಂದು ಡಾಟಾ ಟಾಸ್ಕ್ ಮಾಡುವುದಕ್ಕೆ 1010 ರು. ಹಣ ಕಟ್ಟಿದರೆ ಒಟ್ಟು 1500 ರು. ಬರುತ್ತದೆ ಎಂದು ವಂಚಕರು ಹೇಳಿದಾಗ ಶಾಲಿನಿರವರಿಗೆ ಆ ಹಣ ಬಂದಿದೆ. ನಂತರ 7 ರಿಂದ 12 ಟಾಸ್ಕ್ 5 ಗೂಗಲ್ ರಿವಿವ್ಯೂಗಳು ಮತ್ತು 1 ಡಾಟಾ ಟಾಸ್ಕ್ ಮಾಡಿದರೆ 900 ರು. ಹಣ ನೀಡುವುದಾಗಿ ಹೇಳಿದ ವಂಚಕರು, ಒಂದು ಡಾಟಾ ಟಾಸ್ಕ್ ಗೆ 3010 ರು. ಪಾವತಿಸಬೇಕೆಂದಾಗ ಆ ಹಣ ಪಾವತಿಸಿದಾಗಲು ವಾಪಸ್ ಬಂದಿದೆ.
ಆನಂತರ 13 ರಿಂದ 15 ಟಾಸ್ಕ್ 5 ಗೂಗಲ್ ರಿವಿವ್ಯೂಗಳು ಮತ್ತು 1 ಡಾಟಾ ಟಾಸ್ಕ್ ಮಾಡಿದರೆ 1200 ರು. ನೀಡುವುದಾಗಿ ಹೇಳಿ ವಂಚಕರು 7010 ರು. ಹಣ ಕಟ್ಟಿಸಿಕೊಂಡ ಮೇಲೆ ಶಾಲಿನಿರವರಿಗೆ ಯಾವುದೇ ಹಣ ವಾಪಸ್ ಬಂದಿಲ್ಲ. ಹಣ ಬಂದಿಲ್ಲವೆಂದು ಕೇಳಿದಾಗ ನೀವು ತಪ್ಪಾಗಿ ಹಣ ಹಾಕಿದ್ದೀರಿ ಎಂದು ಹೇಳಿ 28,960 ರು. ಹಾಕಿಸಿಕೊಂಡಿದ್ದಾರೆ. ಅದೇ ರೀತಿ ಪದೆ ಪದೇ ನೀವು ತಪ್ಪಾಗಿ ಹಣ ಹಾಕಿದ್ದೀರಿ ಎಂದು ವಂಚಕರು ಹೇಳಿ ಶಾಲಿನಿ ಅವರಿಂದ ಒಟ್ಟು 16,55,556 ರು.ಗಳನ್ನು ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿದ್ದಾರೆ.
ಗೃಹಿಣಿಗೆ 3.46 ಲಕ್ಷ ರು.ವಂಚನೆ :
ಮತ್ತೊಂದು ಪ್ರಕರಣದಲ್ಲಿ ಶಾಹಿದಾ ಬಾನುರವರ ಮೊಬೈಲ್ ನಂಬರ್ ಗೆ ಕರೆ ಮಾಡಿರುವ ವಂಚಕರು, ವರ್ಕ್ ಫ್ರಂ ಹೋಮ್ ಕೆಲಸದ ಆಫರ್ ನೀಡಿದ್ದಾರೆ. ಅದರಂತೆ ಶಾಹಿದಾರವರು ವಾಟ್ಸ್ ಆಪ್ ನಲ್ಲಿ ಲಿಂಕ್ ಅನ್ನು ಕ್ಲಿಕ್ ಮಾಡಿದಾಗ ರಿವಿವ್ಯೂಗಳನ್ನು ಕಳುಹಿಸಿ ನಿಮಗೆ ಹಣ ಬೇಕಾದರೆ ಟೆಲಿಗ್ರಾಮ್ ಗ್ರೂಪ್ ಗೆ ಆಡ್ ಆಗುವಂತೆ ಹೇಳಿದಾಗ ಆಡ್ ಆಗಿದ್ದಾರೆ. ನಂತರ 3 ರಿವಿವ್ಯೂಗಳನ್ನು ಕಳುಹಿಸಿದಾಗ 150 ರು. ಬಂದಿದೆ. ನಂತರ ಪ್ರತಿಯೊಂದು ರಿವಿವ್ಯೂಗೆ 100 ರು. ಹಣ ಕೊಡುತ್ತೇವೆ. ಅದಕ್ಕೆ ನೀವು 2 ಸಾವಿರ ರು. ಡೆಪಾಸಿಟ್ ಮಾಡಬೇಕೆಂದು ವಂಚಕರು ಹೇಳಿದಾಗ ಶಾಹಿದಾರವರು ಹಣ ಕಳುಹಿಸಿದ್ದಾರೆ.
6 ರಿವ್ಯೂಗೆ 600 ರು. ಕೊಟ್ಟಿದ್ದಾರೆ. 30 ಸಾವಿರ ರು. ಹಾಕಿದರೆ ಒಂದು ರಿವಿವ್ಯೂಗೆ 600 ರು. ಸಿಗುತ್ತದೆ ಎಂದು ವಂಚಕರು ಹೇಳಿದಾಗ ಆ ಹಣವನ್ನು ಕಳುಹಿಸಿದ್ದಾರೆ. ಇದೇ ರೀತಿ 3,46,000 ರು.ಗಳನ್ನು ಕಳೆದುಕೊಂಡಿದ್ದಾರೆ. ಈ ಸಂಬಂಧ ಶಾಲಿನಿ ಮತ್ತು ಶಾಹಿದಾ ಬಾನು ರಾಮನಗರ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ.