
ಟ್ಯೂಷನ್‌ಗೆ ಬರುತ್ತಿದ್ದ 10ನೇ ತರಗತಿಯ ಬಾಲಕಿಯನ್ನು ಪುಸಲಾಯಿಸಿ ಆಕೆಯೊಂದಿಗೆ ಓಡಿ ಹೋಗಿ ಮದುವೆಯಾಗಿದ್ದ ಆರೋಪಿ ಶಿಕ್ಷಕನನ್ನು ಒಂದೂವರೆ ತಿಂಗಳ ಬಳಿಕ ಜೆ.ಪಿ.ನಗರ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಕನಕಪುರದ ದೊಡ್ಡಸಾತೇನಹಳ್ಳಿಯ ಅಭಿಷೇಕ್ (25) ಎಂದು ಗುರುತಿಸಲಾಗಿದೆ.
ಆರೋಪಿಗೆ ಕಳೆದ ನಾಲ್ಕು ವರ್ಷದ ಹಿಂದೆ ಮದುವೆಯಾಗಿತ್ತು, ಜೊತೆಗೆ ಒಂದು ಮಗು ಕೂಡ ಇತ್ತು, ಆದರೆ ವೈಯಕ್ತಿಕ ಕಾರಣದ ಹಿನ್ನಲೆ ಪತ್ನಿಯಿಂದ ದೂರವಾಗಿ ಜೆಪಿ ನಗರದ ಸಾರಕ್ಕಿ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ..
ಅಷ್ಟೇ ಅಲ್ಲದೆ ಕಳೆದ ಕೆಲ ವರ್ಷಗಳಿಂದ 1ರಿಂದ 10ನೇ ತರಗತಿವರೆಗಿನ ಶಾಲಾ ಮಕ್ಕಳಿಗೆ ಮನೆಯಲ್ಲಿ ಟ್ಯೂಷನ್ ತೆಗೆದುಕೊಳ್ಳುತ್ತಿದ್ದ, ಹೀಗೆ ಕಳೆದ ಆರು ವರ್ಷಗಳಿಂದ ಸಂತ್ರಸ್ತ ಬಾಲಕಿಯೊಬ್ಬಳು ಟ್ಯೂಷನ್ ಗಾಗಿ ಬರುತ್ತಿದ್ದಳು, ಕಳೆದ ನವೆಂಬರ್ 23ರಂದು ಎಂದಿನಂತೆ ಟ್ಯೂಷನ್‌ಗೆ ಹೋಗಿದ್ದು ರಾತ್ರಿಯಾದರೂ ಮನೆಗೆ ಹಿಂದಿರುಗಿರಲಿಲ್ಲ.
ಇದರಿಂದ ಭಯಗೊಂಡ ಪೋಷಕರು ನೇರವಾಗಿ ಆರೋಪಿ ಅಭಿಷೇಕ್ ನ ಮನೆಗೆ ಆಗಮಿಸಿದ್ದಾರೆ. ಆದರೆ ಮನೆ ಬೀಗ ಹಾಕಿರುವುದರಿಂದ ಅನುಮಾನಗೊಂಡ ಪೋಷಕರು ನೇರವಾಗಿ ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೋಷಕರ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ವೇಳೆ ಆರೋಪಿಯ ಮನೆಗೆ ಆಗಮಿಸಿದ ಪೊಲೀಸರು ಮನೆಗೆ ಬೀಗ ಹಾಕಿರುವುದನ್ನು ಗಮನಿಸಿ ಅದನ್ನು ಒಡೆದಿದ್ದಾರೆ. ಈ ವೇಳೆ ಮೇಜಿನ ಮೇಲೆ ಮೊಬೈಲ್ ಫೋನ್ ಅನ್ನು ಬಿಟ್ಟು ಹೋಗಿರುವುದು ಪತ್ತೆಯಾಗಿದೆ. ಈ ವೇಳೆ ಅದನ್ನು ಪರಿಶೀಲಿಸಿದಾಗ ಅಪ್ರಾಪ್ತ ಬಾಲಕಿ ಜೊತೆ ಓಡಿ ಹೋಗಿರುವುದು ದೃಢವಾಗುತ್ತದೆ.
ಬಳಿಕ ವಿಶೇಷ ತಂಡ ರಚಿಸಿದ ಪೊಲೀಸರು ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ, ಆದರೆ ತಾವಿರುವ ಸ್ಥಳದ ಬಗ್ಗೆ ಗೊತ್ತಾಗದಿರಲು ಆನ್‌ಲೈನ್ ಸೇರಿದಂತೆ ಇತರ ಹಣದ ವಹಿವಾಟು ಮಾಡದೇ ಚಾಣಾಕ್ಷತನ ಮರೆದಿದ್ದ. ಇದರಿಂದಾಗಿ ಪೊಲೀಸರಿಗೆ ಆರೋಪಿಯನ್ನು ಪತ್ತೆ ಹಚ್ಚಲು ಬಹಳ ಕಷ್ಟವಾಗಿದೆ.
ಆದರೆ ಆರೋಪಿ ಮಾತ್ರ ತನ್ನ ಬುದ್ದಿ ಶಕ್ತಿಯಿಂದ ಮೊದಲೇ ಬೇಕಾದ ಹಣವನ್ನು ಡ್ರಾ ಮಾಡಿಕೊಂಡು, ಮೊಬೈಲ್ ಅನ್ನು ಕೂಡ ಅಲ್ಲೇ ಬಿಟ್ಟು ಮಂಡ್ಯದ ಮಳವಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ಬಾಲಕಿಯೊಂದಿಗೆ ವಾಸವಾಗಿದ್ದ,
ಆರೋಪಿ ಅಭಿಷೇಕ್ ಗಾಗಿ ಹುಡುಕಾಟ ನಡೆಸಿ ಬೇಸತ್ತ ಪೊಲೀಸರು ಎಲ್ಲಾ ಠಾಣೆಗೆ ಲುಕ್ಔಟ್ ನೋಟಿಸ್ ಜಾರಿ ಮಾಡಲಾಗಿತ್ತು. ಆರೋಪಿಯ ಇರುವಿಕೆಯ ಬಗ್ಗೆ ಸುಳಿವು ನೀಡಿದವರಿಗೆ 25 ಸಾವಿರ ರೂ ನಗದು ಬಹುಮಾನ ನೀಡುವುದಾಗಿಯೂ ಘೋಷಿಸಲಾಗಿತ್ತು.
ಈ ವೇಳೆ ಮಳವಳ್ಳಿ ಬಳಿ ಕೂಡ ಈ ನೋಟಿಸ್ ನೋಡಿದ ಸ್ಥಳೀಯರೊಬ್ಬರು ಆರೋಪಿ ವಾಸವಿದ್ದ ಮನೆಯ ಮಾಲೀಕರಿಗೆ ವಿಷಯ ತಿಳಿಸಿದ್ದಾರೆ. ಈ ವೇಳೆ ಮನೆ ಮಾಲೀಕ ಆರೋಪಿಯ ಬಗ್ಗೆ ಜೆಪಿ ನಗರ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಮಂಡ್ಯಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ಹಾಗೂ ಬಾಲಕಿಯನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆತರಲಾಗಿದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದು, ಬಾಲಕಿಯನ್ನು ಸರ್ಕಾರಿ ಬಾಲಮಂದಿರದಲ್ಲಿ ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.






