ಪ್ಯಾರಾಗ್ಲೈಡಿಂಗ್ ಮಾಡುತ್ತಿದ್ದ ವೇಳೆ ಕಮರಿಗೆ ಬಿದ್ದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ಉತ್ತರ ಗೋವಾದಲ್ಲಿ ನಡೆದಿದೆ.
ಪ್ರವಾಸಕ್ಕೆ ಬಂದಿದ್ದ ಪುಣೆಯ ನಿವಾಸಿ ಶಿವಾನಿ ಡೇಬಲ್ ಮತ್ತು ಪ್ಯಾರಾಗ್ಲೈಡಿಂಗ್ ವೇಳೆ ಜತೆಗಿರುವ ತರಬೇತುದಾರ ನೇಪಾಳಿ ಪ್ರಜೆ ಸುಮಲ್ ಮೃತಪಟ್ಟಿದ್ದಾರೆ
ಶನಿವಾರ ಸಂಜೆ ಕೇರಿ ಗ್ರಾಮದಲ್ಲಿ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿದ್ದ ಸಾಹಸ ಕ್ರೀಡಾ ಕಂಪನಿಯಲ್ಲಿ ಶಿವಾನಿ ಪ್ಯಾರಾಗ್ಲೈಡ್ ಮಾಡಿದ್ದಾರೆ. ಪ್ಯಾರಾಗ್ಲೈಡರ್ ಬಂಡೆಯಿಂದ ಟೇಕಾಫ್ ಆದ ಕೂಡಲೇ ಕಮರಿಗೆ ಬಿದ್ದಿದ್ದು , ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೀವಕ್ಕೆ ಅಪಾಯ ತಂದೊಡ್ಡಿದ ಕಾರಣಕ್ಕೆ ಕಂಪನಿಯ ಮಾಲೀಕ ಶೇಖರ್ ರೈಜಾದಾ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ