
ಅಮೆರಿಕದಲ್ಲಿ ದಾಖಲೆ ರಹಿತವಾಗಿ ನೆಲೆಸಿರುವ ಭಾರತೀಯರನ್ನು ಕಾನೂನುಬದ್ಧವಾಗಿ ವಾಪಸ್ ಕರೆಸಿಕೊಳ್ಳಲು ಭಾರತ ಮುಕ್ತವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಬುಧವಾರ ತಿಳಿಸಿದ್ದಾರೆ.
ಅಮೆರಿಕದಿಂದ ಭಾರತಕ್ಕೆ ಗಡೀಪಾರು ಮಾಡಬಹುದಾದವರ ಸಂಖ್ಯೆಯನ್ನು ನವದೆಹಲಿ ಪರಿಶೀಲಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ರೀತಿಯ ಕಾನೂನು ಪಾಲನೆಯನ್ನು ಸರ್ಕಾರವಾಗಿ ನಾವು ಬೆಂಬಲಿಸುತ್ತೇವೆ. ಜಾಗತಿಕ ಮಟ್ಟದಲ್ಲಿ ಭಾರತೀಯ ಪ್ರತಿಭಾವಂತರು ಗರಿಷ್ಠ ಅವಕಾಶಗಳನ್ನು ಪಡೆಯಬೇಕು ಎಂದೂ ಬಯಸುತ್ತೇವೆ. ಅದರ ಜತೆಗೆ ನಾವು ದೃಢವಾಗಿ ಅಕ್ರಮ ವಲಸೆಯನ್ನೂ ವಿರೋಧಿಸುತ್ತೇವೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
‘ನಮ್ಮ ಪ್ರಜೆಗಳು ಅಮೆರಿಕದಲ್ಲಿ ಅಕ್ರಮವಾಗಿ ಉಳಿದುಕೊಂಡಿದ್ದರೆ, ಅವರನ್ನು ಕಾನೂನು ಬದ್ಧವಾಗಿ ವಾಪಸ್ ಕರೆತರಲು ಮುಕ್ತರಾಗಿದ್ದೇವೆ’ ಎಂದು ಜೈಶಂಕರ್ ಪ್ರತಿಪಾದಿಸಿದ್ದಾರೆ.
‘ದಾಖಲೆಯಿಲ್ಲದೆ ಅಥವಾ ವೀಸಾ ಅವಧಿ ಮುಗಿದಿದ್ದರೂ ಉಳಿದುಕೊಂಡಿರುವವರ ಗಡೀಪಾರಿಗೆ ಭಾರತವು ಅಮೆರಿಕದ ಜತೆ ಕಾರ್ಯನಿರ್ವಹಿಸುತ್ತಿದೆಯೇ’ ಎಂಬ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ.
‘ವೀಸಾ ಪಡೆಯಲು 400 ದಿನಗಳವರೆಗೆ ಕಾಯುವುದು ಸರಿಯಲ್ಲ. ಹೀಗಾದರೆ, ಈ ಸಂಬಂಧ ಉತ್ತಮವಾಗಿದೆ ಎಂದು ಭಾವಿಸಲು ಆಗುವುದಿಲ್ಲ’ ಎಂಬುದನ್ನು ಅಮೆರಿಕದ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರಿಗೆ ಹೇಳಿರುವುದಾಗಿ ಜೈಶಂಕರ್ ತಿಳಿಸಿದ್ದಾರೆ.
